Connect with us

FILM

ತಮಿಳು ನಟ ಸೂರ್ಯ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಹೈಕೋರ್ಟ್ ಜಡ್ಜ್ ಪತ್ರ

ಚೆನ್ನೈ: ಕೊರೊನಾ ನಡುವೆ ನೀಟ್ ಪರೀಕ್ಷೆ ನಡೆಸುವ ಕೇಂದ್ರ ಸರಕಾರ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ವಿರುದ್ದ ಹೇಳಿಕೆ ನೀಡಿದ ತಮಿಳಿನ ಖ್ಯಾತ ನಟ ಸೂರ್ಯ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂದು ಮದ್ರಾಸ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಅಮ್ರೇಶ್ವರ್ ಪ್ರತಾಪ್ ಸಹಿ ಅವರಿಗೆ ನ್ಯಾಯಾಧೀಶರಾದ ಎಸ್ ಎಂ ಸುಬ್ರಹ್ಮಣ್ಯಂ ಪತ್ರದ ಮೂಲಕ ಒತ್ತಾಯಿಸಿದ್ದಾರೆ.


ನಿನ್ನೆ ನಟ ಸೂರ್ಯ ಹೇಳಿಕೆಯೊಂದನ್ನು ನೀಡಿ, ತಮಿಳು ನಾಡಿನಲ್ಲಿ ಮೂವರು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡ ಕುಟುಂಬಗಳ ವಿದ್ಯಾರ್ಥಿಗಳ ಕನಸುಗಳನ್ನು ಕಿತ್ತು ಹಾಕುತ್ತಿರುವ ನೀಟ್ ಪರೀಕ್ಷೆಯನ್ನು ಶಾಶ್ವತವಾಗಿ ರದ್ದುಗೊಳಿಸಿ ಎಂದು ಸರ್ಕಾರವನ್ನು ಒತ್ತಾಯಪಡಿಸಿದ್ದರು. ನೀಟ್ ಪರೀಕ್ಷೆಯನ್ನು ತೆಗೆದುಹಾಕುವ ಸಂಬಂಧ ಇದಕ್ಕೆ ಸಂಬಂಧಪಟ್ಟವರೆಲ್ಲರೂ ಧ್ವನಿಯೆತ್ತಬೇಕು ಎಂದು ನಟ ಒತ್ತಾಯಿಸಿದ್ದರು.


ಈ ಹೇಳಿಕೆ ವೇಳೆ ನಟ ಸೂರ್ಯ, ನ್ಯಾಯಾಲಯದ ಕಾರ್ಯವೈಖರಿ ಬಗ್ಗೆ ಕೂಡ ಮಾತನಾಡಿದ್ದು, ಕೋವಿಡ್-19 ಸಾಂಕ್ರಾಮಿಕ ರೋಗದ ಭಯದಲ್ಲಿ ನ್ಯಾಯಾಲಯಗಳು ವರ್ಚುವಲ್ ವಿಚಾರಣೆ ಮೂಲಕ ನ್ಯಾಯ ವಿಲೇವಾರಿ ಮಾಡುತ್ತಿವೆ, ಆದರೆ ವಿದ್ಯಾರ್ಥಿಗಳಿಗೆ ಮಾತ್ರ ಯಾವುದೇ ಭಯವಿಲ್ಲದೆ ನೀಟ್ ಪರೀಕ್ಷೆಯನ್ನು ಪರೀಕ್ಷಾ ಕೇಂದ್ರಗಳಿಗೆ ಹೋಗಿ ಬರೆಯಿರಿ ಎಂದು ಹೇಳುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನ್ಯಾಯಾಧೀಶ ಎಸ್ ಎಂ ಸುಬ್ರಹ್ಮಣ್ಯಮ್, ನಟ ಸೂರ್ಯ ಅವರ ಹೇಳಿಕೆಯನ್ನು ನೋಡಿದರೆ, ನ್ಯಾಯಾಧೀಶರು ತಮ್ಮ ಸ್ವಂತ ಜೀವದ ಭಯದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯದಾನ ಮಾಡುತ್ತಾರೆ,ವಿದ್ಯಾರ್ಥಿಗಳಿಗೆ ಯಾವುದೇ ಭಯವಿಲ್ಲದೆ ನೀಟ್ ಪರೀಕ್ಷೆ ಬರೆಯಿರಿ ಎಂದು ಆದೇಶ ನೀಡುವ ಮೂಲಕ ಮಾನವೀಯತೆ, ನೈತಿಕತೆ ತೋರಿಸುತ್ತಿಲ್ಲ ಎಂಬ ಮನೋಭಾವ ಹೊಂದಿದ್ದಾರೆ ಎಂಬರ್ಥ ನೀಡುತ್ತದೆ. ಇದು ನನ್ನ ಅಭಿಪ್ರಾಯದಲ್ಲಿ ನ್ಯಾಯಾಂಗ ನಿಂದನೆಯಾಗಿದ್ದು, ಈ ದೇಶದ ನ್ಯಾಯಾಂಗ ವ್ಯವಸ್ಥೆ ಮತ್ತು ನ್ಯಾಯಾಧೀಶರ ಮೇಲೆ ನಂಬಿಕೆ, ಗೌರವ ನಟ ಸೂರ್ಯ ಅವರಿಗಿಲ್ಲ ಎಂಬುದನ್ನು ತೋರಿಸುತ್ತದೆ. ಇದರಿಂದ ಸಾರ್ವಜನಿಕರಿಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ, ವಿಶ್ವಾಸ, ಗೌರವ ಹೊರಟುಹೋಗುತ್ತದೆ ಎಂದು ನ್ಯಾಯಾಧೀಶ ಸುಬ್ರಹ್ಮಣ್ಯಂ ಆರೋಪಿಸಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *