KARNATAKA
ಮಡಿಕೇರಿ ಹೋಂಸ್ಟೇವೊಂದರಲ್ಲಿ ಮಗುವನ್ನು ಕೊಂದು ನೇಣಿಗೆ ಶರಣಾದ ಕೇರಳ ಮೂಲದ ದಂಪತಿ

ಮಡಿಕೇರಿ ಡಿಸೆಂಬರ್ 09:ಕೇರಳ ಮೂಲದ ಮೂವರ ಮೃತದೇಹಗಳು ಪತ್ತೆಯಾದ ಘಟನೆ ಮಡಿಕೇರಿ ಸಮೀಪದ ಕಗ್ಗೋಡ್ಲುವಿನ ಹೋಂಸ್ಟೇವೊಂದರಲ್ಲಿ ನಡೆದಿದೆ. ಕೇರಳದ ಕೊಲ್ಲಂ ನಗರದ ನಿವಾಸಿ ವಿನೋದ್, ಅವರ ಪತ್ನಿ ಹಾಗೂ ಅವರ ಮಗುವಿನ ಮೃತದೇಹಗಳು ಶನಿವಾರ ಪತ್ತೆಯಾಗಿವೆ.
ವಿನೋದ್ ಹಾಗೂ ಅವರ ಪತ್ನಿಯ ಮೃತದೇಹಗಳು ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿದ್ದರೆ, ಇವರ ಮಗುವಿನ ಶವ ಹಾಸಿಗೆಯ ಮೇಲೆ ದೊರೆತಿದೆ. ಇವರು ಶುಕ್ರವಾರ ಇಲ್ಲಿಗೆ ಬಂದು ಹೋಂಸ್ಟೇನಲ್ಲಿ ತಂಗಿದ್ದರು.
ಮಗುವನ್ನು ಕೊಂದು ದಂಪತಿ ನೇಣಿಗೆ ಶರಣಾಗಿರುವ ಶಂಕೆ ಇದೆ. ಇನ್ನು ವಿನೋದ್ ಅವರ ಪತ್ನಿ ಹಾಗೂ ಮಗುವಿನ ವಿವರಗಳು ತಿಳಿದು ಬಂದಿಲ್ಲ. ಅವರ ಸಂಬಂಧಿಕರೊಬ್ಬರು ಸಂಪರ್ಕಕ್ಕೆ ಸಿಕ್ಕಿದ್ದು, ಅವರು ಬಂದ ಮೇಲಷ್ಟೇ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
