KARNATAKA
ಮತದಾರರಿಗೆ ಉಚಿತ ಗ್ಯಾರಂಟಿ ಆಮಿಷ: ಜಮೀರ್ ಶಾಸಕತ್ವ ಅಸಿಂಧು ಅರ್ಜಿ ವಿಚಾರಣೆ ಅ.5ಕ್ಕೆ ಮುಂದೂಡಿಕೆ
ಬೆಂಗಳೂರು ಸೆಪ್ಟೆಂಬರ್ 15: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಉಚಿತ ಗ್ಯಾರಂಟಿಗಳ ಆಮಿಷವೊಡ್ಡುವ ಮೂಲಕ ಚುನಾವಣಾ ಅಕ್ರಮ ಎಸಗಿರುವ ಹಿನ್ನೆಲೆಯಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಜಮೀರ್ ಅಹ್ಮದ್ ಖಾನ್ (ಹಾಲಿ ವಸತಿ ಸಚಿವ) ಅವರು ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಅ.5ಕ್ಕೆ ಮುಂದೂಡಿದೆ.
ಈ ಕುರಿತಂತೆ ಚಾಮರಾಜಪೇಟೆ ನಿವಾಸಿ ಶಶಾಂಕ್ ಜೆ. ಶ್ರೀಧರ್ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ, ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.
ಕೆಲ ಕಾಲ ವಿಚಾರಣೆ ನಡೆಸಿದ ನ್ಯಾಯಪೀಠ, ಚುನಾವಣಾ ತಕರಾರು ಅರ್ಜಿಯ ಪ್ರತಿ ಮತ್ತು ಅರ್ಜಿಯೊಂದಿಗೆ ಸಲ್ಲಿಸಿರುವ ದಾಖಲೆಗಳನ್ನು ಜಮೀರ್ ಪರ ವಕೀಲರಿಗೆ ಒದಗಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಅ.5ಕ್ಕೆ ಮುಂದೂಡಿತು. ಜತೆಗೆ, ಮುಂದಿನ ವಿಚಾರಣಾ ದಿನಾಂಕದೊಳಗೆ ಅರ್ಜಿಗೆ ಲಿಖಿತ ಆಕ್ಷೇಪಣಿ ಸಲ್ಲಿಸುವಂತೆ ಜಮೀರ್ ಪರ ವಕೀಲರಿಗೆ ಸೂಚಿಸಿತು.
ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರಿಗೆ ಆಮಿಷವೊಡ್ಡಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಅದೇ ರೀತಿ ಜಮೀರ್ ಅಹ್ಮದ್ ಖಾನ್ ಸಹ ಚಾಮರಾಜಪೇಟೆ ಕ್ಷೇತ್ರದಿಂದ ಆಯ್ಕೆಗಿದ್ದಾರೆ. ಇದು ಚುನಾವಣಾ ಅಕ್ರಮಕ್ಕೆ ಸಮನಾಗಿದ್ದು, ಅವರ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.