LATEST NEWS
70 ವರ್ಷದ ವೃದ್ಧನ ಲಿವ್ ಇನ್ ರಿಲೇಷನ್ಶಿಪ್ ನಿಂದ ಆಗಿದ್ದೇನು ಗೊತ್ತಾ…!?

ಲಖನೌ, ಡಿಸೆಂಬರ್ 27: ಇಂದಿನ ಕಾಲ ಘಟ್ಟದಲ್ಲಿ ಲಿವ್ ಇನ್ ರಿಲೇಷನ್ಶಿಪ್ ಎನ್ನುವುದು ಅತ್ಯಂತ ಸಾಮಾನ್ಯ ವಿಚಾರವಾಗಿ ಬದಲಾಗಿಬಿಟ್ಟಿದೆ. ಮದುವೆಗೂ ಮೊದಲು ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದು, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ನಂತರ ದಾಂಪತ್ಯ ಆರಂಭಿಸುತ್ತೇವೆ ಎನ್ನುತ್ತಿದೆ ಯುವ ಸಮಾಜ. ಯುವಜನತೆ ಹೇಗಾದರು ಇರಲಿ ಅಂದ್ರೆ, ಇಲ್ಲೊಬ್ಬ 70 ವರ್ಷದ ವೃದ್ಧ ಕೂಡ ಲಿವ್ ಇನ್ ರಿಲೇಷನ್ಶಿಪ್ನಲ್ಲೇ ಇದ್ದು, ದಾರುಣ ಅಂತ್ಯ ಕಂಡಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಇಂತದ್ದೊಂದು ಘಟನೆ ವರದಿಯಾಗಿದೆ. 70 ವರ್ಷದ ರಾಮ್ ದಯಾಲ್ಗೆ ಮದುವೆಯಾಗಿ, ಮಕ್ಕಳು, ಮೊಮ್ಮಕ್ಕಳಿದ್ದಾರೆ. ಹಾಗಿದ್ದರೂ ಆತನಿಗೆ ಲಿವ್ ಇನ್ ರಿಲೇಷನ್ಶಿಪ್ ಹುಚ್ಚು ಹತ್ತಿದ್ದು, ಶಾಂತಿ ದೇವಿ ಹೆಸರಿನ ಮಹಿಳೆಯೊಂದಿಗೆ ಲಿವ್ ಇನ್ ರಿಲೇಷನ್ಶಿಪ್ ಆರಂಭಿಸಿದ್ದಾನೆ. ವಯಸ್ಸಾದ ಅಪ್ಪ ಏನಾದರೂ ಮಾಡಿಕೊಳ್ಳಲಿ ಎಂದು ಮಕ್ಕಳು ಸುಮ್ಮನಾಗಿದ್ದಾರೆ. ಆದರೆ ಅಷ್ಟಕ್ಕೆ ಸುಮ್ಮನಾಗದ ರಾಮ್ ದಯಾಲ್, ತನ್ನ 57 ಲಕ್ಷ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಮಾರಲು ಮುಂದಾಗಿದ್ದಾನೆ. ಅದಕ್ಕೆಂದು ಒಬ್ಬರಿಂದ 11 ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದಿದ್ದಾನೆ. ಅದರಲ್ಲಿ 4 ಲಕ್ಷ ರೂಪಾಯಿಯನ್ನು ಶಾಂತಿ ದೇವಿಗೆ ಕೊಟ್ಟಿದ್ದಾನೆ.

ಹೆಂಡತಿ ಮಕ್ಕಳಿರುವಾಗಲೇ ಹಣವನ್ನು ಬೇರೊಬ್ಬ ಮಹಿಳೆಗೆ ಹಣ ಕೊಟ್ಟಿದ್ದಕ್ಕೆ, ಹೆಂಡತಿ ಮಕ್ಕಳು ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಅಪ್ಪನಿಗೆ ತಿಳಿ ಹೇಳಲೆಂದು ಇಬ್ಬರು ಮಕ್ಕಳು ಮತ್ತು ಅವರ ಮೂರು ಸ್ನೇಹಿತರು, ಅಪ್ಪ ಮತ್ತು ಶಾಂತಿ ದೇವಿ ಇದ್ದ ಮನೆಗೆ ತೆರಳಿದ್ದಾರೆ. ಈ ವೇಳೆ ನಾವು ಆಸ್ತಿಯನ್ನು ಮಾರಾಟ ಮಾಡಿಯೇ ತೀರುತ್ತೇವೆ ಎಂದು ಶಾಂತಿ ದೇವಿ ಹೇಳಿದ್ದಾಳೆ.
ಇದರಿಂದ ಸಿಟ್ಟಿಗೆದ್ದ ಮಕ್ಕಳು ಅಪ್ಪ ಮತ್ತು ಶಾಂತಿ ದೇವಿಯನ್ನು ಕೊಲೆ ಮಾಡಿದ್ದಾರೆ. ನಂತರ ಅಲ್ಲಿಂದ ಪರಾರಿಯಾಗಿದ್ದಾರೆ.
ಜೋಡಿ ಕೊಲೆ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಆರೋಪಿಗಳು ಯಾರು ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಇದೀಗ ರಾಮ್ ದಯಾಲ್ನ ಇಬ್ಬರು ಮಕ್ಕಳು ಮತ್ತು ಅವರ ಮೂವರು ಸ್ನೇಹಿತರು ಜೈಲು ಪಾಲಾಗಿದ್ದಾರೆ.