LATEST NEWS
ಮರೆಯಾದ ಮಾವುತನಿಗೆ ಆನೆಯ ಕಣ್ಣೀರ ವಿದಾಯ…!!
ಕೇರಳ ಜೂನ್ 04: ಇದೊಂದು ಮನಕಲಕುವ ದೃಶ್ಯವಾಗಿದ್ದು, ತನ್ನನ್ನು ಸಾಕಿ ಬೆಳೆಸಿದ ಮಾವುತನ ಸಾವಿಗೆ ಆನೆ ಅಂತಿಮ ದರ್ಶನಕ್ಕೆ ಬಂದು, ತನ್ನ ಕಣ್ಣೀರಿನ ಶೃದ್ದಾಂಜಲಿ ಸಲ್ಲಿಸಿರುವ ಘಟನೆ ಕೇರಳದಲ್ಲಿ ನಡೆದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೊಂದು ಅಪರೂಪದ ವಿದಾಯ, ತನ್ನನ್ನು ತಿದ್ದಿ ತೀಡಿದ್ದ ಮಾವುತ ಕ್ಯಾನ್ಸರ್ ಗೆ ಬಲಿಯಾದ ಸಂದರ್ಭ ಆನೆ ಬಂದು ಅಂತಿಮ ದರ್ಶನ ಪಡೆದಿದೆ.
ಆನೆ ಮಾವುತ ಓಮನ್ ಚೆಟ್ಟನ್ ಕೇರಳದ ಕೊಟ್ಟಾಯಂ ನವರು , ಕಳೆದ 6 ದಶಕಗಳಿಂದ ಓಮನ್ ಚೆಟ್ಟನ್ ಆನೆಗಳ ಆರೈಕೆಯಲ್ಲಿ ತೊಡಗಿಕೊಂಡಿದ್ದು, ಕ್ಯಾನ್ಸರ್ ಹಿನ್ನಲೆ ಗುರುವಾರ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು, ಆನೆಗಳನ್ನು ಅತೀ ಪ್ರೀತಿಯಿಂದ ಓಮನ್ ಚೆಟ್ಟನ್ ನೋಡಿಕೊಳ್ಳುತ್ತಿದ್ದರು.
ಹಲವಾರು ಆನೆಗಳನ್ನು ಪ್ರಿತಿಯಿಂದ ನೋಡಿಕೊಂಡಿರುವ ಓಮನ್ ಚೆಟ್ಟನ್ ಅವರಿಗೆ ತಾವೇ ಸಾಕಿದ ಆನೆಯೊಂದು ಬಂದು ಕಣ್ಣೀರಿನ ಶೃದ್ದಾಂಜಲಿ ಸಲ್ಲಿಸಿದೆ. ಆನೆ ಬ್ರಹ್ಮದಾನ್ ಗೆ ಓಮನ್ ಚೆಟ್ಟನ್ ಮಾವುತನಾಗಿ ಸುಮಾರು 25ಕ್ಕೂ ಹೆಚ್ಚು ವರ್ಷ ನೋಡಿಕೊಂಡಿದ್ದರು. ಓಮನ್ ಚೆಟ್ಟನ್ ಅವರು ನಿಧನರಾದ ಸುದ್ದಿ ತಿಳಿದ ಆನೆ ಮಾಲೀಕರು ಸುಮಾರು 20ಕಿಲೋ ಮೀಟರ್ ದೂರದಿಂದ ಮಾವುತನ ಮನೆಗೆ ಆನೆಯನ್ನು ಕರೆದುಕೊಂಡು ಬಂದು ಅಂತಿಮ ದರ್ಶನ ಮಾಡಿಸಿದ್ದಾರೆ.
ತನ್ನನ್ನು ಸಾಕಿದ ಮಾವುತನ ಅಂತಿಮ ದರ್ಶಕ್ಕೆ ಮೂಕ ಪ್ರಾಣಿ ಆನೆ ಭಾರವಾದ ಹೆಜ್ಜೆ ಇಟ್ಟುಕೊಂಡು ಬಂದಿದ್ದು, ತನ್ನ ಸೊಂಡಿಲಿನ ಮೂಲಕ ಮಾವುತನ ಅಂತಿಮ ದರ್ಶನ ಪಡೆದಾಗ ಸ್ಥಳದಲ್ಲಿ ನೆರೆದಿದ್ದವರು ಒಂದು ಕ್ಷಣ ಬಾವುಕರಾದರು. ಈ ದೃಶ್ಯ ಎಂಥವರ ಕಣ್ಣಂಚಿನಲ್ಲಿಯೂ ಒಂದು ಹನಿ ನೀರು ಮೂಡಿಸದೇ ಇರದು. ಕೇರಳದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಲ್ಲಿ ಮಾತಿಲ್ಲ. ಕೇವಲ ಭಾವನೆಗಳು. ಭಾವನೆಗಳೊಂದಿಗೆ ಪ್ರಯಾಣ.. ಅದರೊಂದಿಗೆ ಜೀವನ. ಬದುಕಿನ ಪ್ರಯಾಣ ಮಾವುತ ಮುಗಿಸಿದ್ದಾನೆ ಎನ್ನುವ ಸತ್ಯ ಆನೆಗೂ ಗೊತ್ತು.