LATEST NEWS
ಪ್ರೀತಿಸಿ ಮತಾಂತರಗೊಂಡು ಮದುವೆಯಾದ ಮಹಿಳೆ ಈಗ ಬೀದಿಪಾಲು
ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಪ್ರೀತಿಸಿ ಮತಾಂತರಗೊಂಡು ಮದುವೆಯಾದ ಮಹಿಳೆಯೊಬ್ಬಳು ಇದೀಗ ನೆಲೆ ಇಲ್ಲದೆ ಬೀದಿಗೆ ಬಿದ್ದಿದ್ದು, ಪತಿಯನ್ನು ಹುಡುಕಿಕೊಡುವಂತೆ ಮಾಧ್ಯಮದ ಮುಂದೆ ತಮ್ಮಅಳಲನ್ನು ತೋಡಿಕೊಂಡಿದ್ದಾರೆ.
ಕೇರಳದ ಕಣ್ಣೂರು ಗ್ರಾಮದ ಪ್ರಸಿದ್ಧ ಕುಟುಂಬದ ವಿವಾಹಿತ ಮಹಿಳೆ ಶಾಂತಿ ಜೂಬಿಗೂ ದ.ಕ.ಜಿಲ್ಲೆಯ ಸುಳ್ಯದ ಕಟ್ಟೆಕಾರ್ ಎಂಬಲ್ಲಿನ ಇಬ್ರಾಹಿಂ ಖಲೀಲ್ ಕಟ್ಟೆಕಾರ್ ಅವರೊಂದಿಗೆ ಫೇಸ್ಬುಕ್ ನಲ್ಲಿ ಪರಿಚಯವಾಗಿದೆ. ನಂತರ ಈ ಪರಿಚಯ ಪ್ರೀತಿಗೆ ತಿರುಗಿತ್ತು. ಇದರಿಂದ ಮೊದಲ ಹಿಂದೂ ಗಂಡನಿಂದ ವಿಚ್ಛೇದನ ಪಡೆದ ಅವರು ಈತನನ್ನು ಮದುವೆಯಾಗಲು ಒಪ್ಪಿದ್ದಾರೆ.
ಅಲ್ಲದೆ ಮದುವೆಗಾಗಿ ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡು ಮುಸ್ಲಿಂ ಆಚಾರ-ವಿಚಾರಗಳನ್ನು ಕಲಿತುಕೊಂಡ ಅವರು ಇಬ್ರಾಹಿಂ ಖಲೀಲ್ ಕಟ್ಟೆಕಾರ್ 2017 ಜುಲೈ 12ರಂದು ಬೆಂಗಳೂರಿನ ಮಸೀದಿಯೊಂದರಲ್ಲಿ ಇಸ್ಲಾಂ ಕಾನೂನಿನಂತೆ ಸಾಕ್ಷಿಗಳ ಸಮ್ಮುಖದಲ್ಲಿ ಮದುವೆ (ನಿಖಾಹ್)ಯಾಗಿದ್ದಾರೆ.
ಮತಾಂತರ ಬಳಿಕ ಶಾಂತಿ ಜೂಬಿ ಆಸಿಯಾ ಆಗಿ ಹೆಸರು ಬದಲಾಯಿಸಿಕೊಂಡಳು. ಬೆಂಗಳೂರಿನಲ್ಲೇ ಆಸಿಯಾ ವಾಸವಿದ್ದಳು. ಖಲೀಲ್ ಸಹ ಬಂದು ಹೋಗುತ್ತಿದ್ದ. ಆಸಿಯಾ ಕೂಡ ಸುಳ್ಯಕ್ಕೆ ಹೋಗಿ ಬರುತ್ತಿದ್ದಳು. ಆರಂಭದಲ್ಲಿ ಸಂಸಾರದ ಬಂಡಿ ಸುಖವಾಗೇ ಸಾಗುತ್ತಿತ್ತು. ಆದರೆ, ಕಳೆದ ಏಳೆಂಟು ತಿಂಗಳಿಂದ ಪತಿ ಎಸ್ಕೇಪ್ ಆಗಿದ್ದಾನೆ.
ಖಲೀಲ್ ಮನೆಯವರನ್ನು ಕೇಳಿದರೆ ಆತನನ್ನು ಬಿಟ್ಟುಬಿಡು ಎಂದು ಬೆದರಿಕೆ ಹಾಕುತ್ತಿದ್ದಾರೆಂದು ಆಸಿಯಾ ದೂರಿದ್ದಾರೆ. ಆತನನ್ನು ನಂಬಿ ಬೆಂಗಳೂರಿನ ವಿಜಯನಗರದಲ್ಲಿ ನಾಲ್ಕೈದು ಕೋಟಿ ಬೆಲೆಬಾಳುವ ಮನೆ, ತವರಿನ ಎಲ್ಲ ಆಸ್ತಿಯನ್ನು ಶಾಂತಿ ನೀಡಿದ್ದಳು. ಇತ್ತ ಖಲೀಲ್ ಮನೆಯವರು ಸಹ ಆಸಿಯಾಳನ್ನು ಹೊರಹಾಕಿದ್ದಾರೆ. ಸದ್ಯ ಲಾಕ್ಡೌನ್ನಿಂದ ಸುಳ್ಯದ ಲಾಡ್ಜ್ನಲ್ಲಿ ವಾಸವಿದ್ದಾರೆ.
ನ್ಯಾಯಕ್ಕಾಗಿ ಮುಸ್ಲಿಂ ಸಂಘಟನೆ ಮೊರೆ ಹೋದ್ರು ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿದರು ಆಸಿಯಾ, ಶುಕ್ರವಾರದವರೆಗೂ ನೋಡಿ ಆಮೇಲೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಅಳಲು ತೋಡಿಕೊಂಡಿದ್ದಾರೆ. ಸದ್ಯ ಮಾನವ ಹಕ್ಕು ಸಂಘಟನೆಯ ಮೊರೆ ಹೋಗಿದ್ದು, ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತದೆ ಕಾದು ನೋಡಬೇಕಿದೆ.