KARNATAKA
ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ ನಿದ್ದೆ ಕೆಡಿಸಿದ ಲೋಕಾಯುಕ್ತ, 9 ಜಿಲ್ಲೆಗಳ 56 ಸ್ಥಳಗಳಲ್ಲಿ ದಾಳಿ..!
ಬೆಂಗಳೂರು : ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ನಿದ್ದೆ ಕೆಡಿಸಿದ್ದಾರೆ. ರಾಜ್ಯ ಸರಕಾರದ ವಿವಿಧ ಇಲಾಖೆಗಳ 11 ಇಂಜಿನೀಯರುಗಳ ಕಚೇರಿ ಮತ್ತು ಮನೆಗಳ ಮೇಲೆ ಏಕಕಾದಲ್ಲಿ ದಾಳಿ ನಡೆಸಿದ್ದಾರೆ.
ಇದರಲ್ಲಿ ಇಬ್ಬರು ನಿವೃತ್ತ ಎಂಜಿನಿಯರ್ ಗಳು ಸೇರಿದ್ದಾರೆ. ರಾಜ್ಯದ 9 ಜಿಲ್ಲೆಗಳ 56 ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು ಕಡತ, ಅಕ್ರಮ ಹಣದ ಬಗ್ಗೆ ಪರಿಶೀಲನೆ ಆರಂಭಿಸಿದ್ದಾರೆ. ಕೋಲಾರದ ತಹಶೀಲ್ದಾರ್ ವಿಜಯಣ್ಣ, ಸಣ್ಣ ನೀರಾವರಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್ ಎಂ.ರವೀಂದ್ರ, ಜಲ ಸಂಪನ್ಮೂಲ ಇಲಾಖೆಯ ಮೈಸೂರು ಸೂಪರಿಂಟೆಂಡಿಂಗ್ ಎಂಜಿನಿಯರ್ ಮಹೇಶ್ ಕೆ., ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡಿಂಗ್ ಎಂಜಿನಿಯರ್ ಕೆ.ಜಿ. ಜಗದೀಶ್, ಧಾರವಾಡ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರ್ ಗೌಡ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ಶಿವರಾಜು ಎಸ್., ಬಿಬಿಎಂಪಿ ಕೆಂಗೇರಿ ವಲಯದ ಕಂದಾಯ ಅಧಿಕಾರಿ ಬಸವರಾಜ ಮಾಗಿ, ದಾವಣಗೆರೆಯ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಎಚ್. ಉಮೇಶ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎಸ್.ಪ್ರಭಾಕರ, ಬೆಳಗಾವಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹದೇವ್ ಬೆನ್ನೂರು, ಹಾಸನದ ಗ್ರಾಮ ಪಂಚಾಯತ್ ಒಂದರ ಗ್ರೇಡ್-1 ಕಾರ್ಯದರ್ಶಿ ಎನ್.ಎಂ. ಜಗದೀಶ್ ಎಂಬವರ ಮನೆ, ಅವರಿಗೆ ಸಂಬಂಧಿಸಿದವರ ಮನೆಗಳು, ಇತರ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಈ ಎಲ್ಲ ಅಧಿಕಾರಿಗಳ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಲೋಕಾಯುಕ್ತ ಪೊಲೀಸ್ ಎಫ್ ಐಆರ್ ದಾಖಲಿಸಿದೆ.