Connect with us

  DAKSHINA KANNADA

  ಲೋಕಸಮರ@24 : ದಕ್ಷಿಣ ಕನ್ನಡದಲ್ಲಿ ನಾಗಲೋಟದಲ್ಲಿರುವ ಕಮಲ ಪಡೆ ಕಟ್ಟಿಹಾಕಲು ಕೈ ರಣತಂತ್ರ..!

  ಮಂಗಳೂರು :  ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೆಸ್ ಕೂಡ ಆ್ಯಕ್ಟಿವ್ ಆಗಿದ್ದು ಚಟುವಟಿಕೆಗಳು ಆರಂಭವಾಗಿದೆ. ಕಾರಣ ರಾಜ್ಯದಲ್ಲಿ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕೈ ಪಡೆ ಸ್ವಲ್ಪ ಹೆಚ್ಚು ಉತ್ಸಾಹದಿಂದ ಫೀಲ್ಡಿಗಿಳಿದಿದೆ.

   

  3 ದಶಕಗಳಿಂದ ಬಿಜೆಪಿಗೆ ಎದುರಾಳಿಯಾಗಿ ಸರಿಯಾದ ಅಭ್ಯರ್ಥಿಗಳಿಲ್ಲದೇ ಪ್ರತಿಭಾರಿಯೂ ಹೀನಾಯ ಸೋಲು ಅನುಭವಿಸುತ್ತಾ ಬಂದಿರುವ ಕಾಂಗ್ರೇಸ್ ನಲ್ಲಿ ಮೊದಲ ಬಾರಿ ಲೋಕಸಭೆ ಟಿಕೇಟ್ ಗಾಗಿ ಪೈಪೋಟಿ ಆರಂಭವಾಗಿದೆ. ಮಂಗಳೂರು ಅಥವಾ ದಕ್ಷಿಣಕನ್ನಡ ಲೋಕಸಭೆ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೇಸ್ ನ ಭದ್ರಕೋಟೆ, ಕಾಂಗ್ರೇಸ್ ನ ಘಟಾನುಘಟಿ ನಾಯಕರುಗಳು ಈ ಕ್ಷೇತ್ರವನ್ನು ಅಕ್ಷರಶಃ ಆಳಿದ್ದಾರೆ. 1957ರಿಂದ 1989ರವರೆಗೆ ಈ ಕ್ಷೇತ್ರ ಕಾಂಗ್ರೆಸ್‌ನ ತೆಕ್ಕೆಯಲ್ಲಿತ್ತು. ಅದರಲ್ಲೂ 1977ರಿಂದ 1989ರವರೆಗೆ ಇಲ್ಲಿ ಸತತ ನಾಲ್ಕು ಚುನಾವಣೆಗಳಲ್ಲಿ ಗೆದ್ದು ಬಿ. ಜನಾರ್ಧನ ಪೂಜಾರಿ ಕ್ಷೇತ್ರವನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದ್ದರು. ಅಲ್ಲದೆ ಕೇಂದ್ರ ಸಚಿವರೂ ಆಗಿದ್ದ ಇದೇ ಜನಾರ್ಧನ ಪೂಜಾರಿಗೆ 1991ರ ಲೋಕಸಭೆ ಚುನಾವಣೆಯಲ್ಲಿ ಸೋಲು ಉಣಿಸಿದವರು ದಿವಂಗತ ವಿ. ಧನಂಜಯ ಕುಮಾರ್‌. ಈ ಮೂಲಕ ಕರಾವಳಿಯಲ್ಲಿ ಮೊದಲ ಬಾರಿಗೆ ಕಮಲದ ಬಾವುಟ ಹಾರಿಸಿದ್ದರು.

  ಜನಾರ್ಧನ ಪೂಜಾರಿಯ ಸತತ ಗೆಲುವಿಗೆ 1991ರಲ್ಲಿ ತಡೆ ಒಡ್ಡಿದ ಧನಂಜಯ ಕುಮಾರ್‌ 1996, 1998ರಲ್ಲಿಯೂ ಪೂಜಾರಿಯನ್ನು ಸೋಲಿಸಿ ಹ್ಯಾಟ್ರಿಕ್‌ ಸೋಲಿನ ರುಚಿ ತೋರಿಸಿದರು. 1999ರಲ್ಲಿ ಕಾಂಗ್ರೆಸ್‌ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿಯನ್ನು ಕಣಕ್ಕಿಳಿಸಿದರೂ ವೇಣೂರು ಧನಂಜಯ ಕುಮಾರ್‌ ಗೆಲುವಿಗೆ ಅಡ್ಡಿಯಾಗಲಿಲ್ಲ. ಸತತ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ ಧನಂಜಯ್‌ ಕುಮಾರ್‌ ವಾಜಪೇಯಿ ಸಂಪುಟದಲ್ಲಿ ಸಚಿವರೂ ಆದರು. ಆದಾದ ಬಳಿಕ 2004ರಲ್ಲಿ ಈ ಕ್ಷೇತ್ರಕ್ಕೆ ಪುತ್ತೂರು ಶಾಸಕರಾಗಿದ್ದ ಡಿವಿ ಸದಾನಂದ ಗೌಡರ ಪ್ರವೇಶವಾಯಿತು. ವೀರಪ್ಪ ಮೋಯ್ಲಿಗೆ ಸೋಲುಣಿಸುವ ಮೂಲಕ ಬಿಜೆಪಿಯ ಗೆಲುವಿನ ಯಾತ್ರೆಯನ್ನು ಡಿವಿಎಸ್ ಮುಂದುವರಿಸಿದರು.

   

  2009ರಲ್ಲಿ ಅವರು ಪಕ್ಕದ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ವಲಸೆ ಹೋಗುವುದರೊಂದಿಗೆ ಕ್ಷೇತ್ರಕ್ಕೆ ಸಾಮಾನ್ಯ ಕಾರ್ಯಕರ್ತರಾಗಿದ್ದ ನಳಿನ್‌ ಕುಮಾರ್‌ ಕಟೀಲ್‌ ಪ್ರವೇಶವಾಯಿತು. ಇದು ಕ್ಷೇತ್ರ ಪುನರ್‌ ವಿಂಗಡಣೆ ಆದ ಬಳಿಕದ ಮೊದಲ ಚುನಾವಣೆಯಾಗಿತ್ತು. ಈ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿದ್ದ ಜನಾರ್ದನ ಪೂಜಾರಿ ವಿರುದ್ಧ ಕಟೀಲ್‌ ನಿರಾಯಾಸವಾಗಿ ಗೆಲುವು ಸಾಧಿಸಿದರು. 2014ರಲ್ಲಿಯೂ ಅವರು ಪೂಜಾರಿಗೆ ಸೋಲುಣಿಸಿದರು. 2019ರಲ್ಲಿ ಅವರು ಮಿಥುನ್‌ ರೈ ವಿರುದ್ಧ ಗೆಲುವು ದಾಖಲಿಸಿ ಹ್ಯಾಟ್ರಿಕ್‌ ಗೆಲುವಿನ ಸರದಾರ ಎನಿಸಿಕೊಂಡರು.

  ಕಳೆದ 32 ವರ್ಷಗಳಿಂದ ಕ್ಷೇತ್ರವನ್ನು ಗೆಲ್ಲಲಾಗದೇ ಹಳಹಳಿಸುತ್ತಿರುವ ಕಾಂಗ್ರೆಸ್‌ ಈ ಬಾರಿಯಾದರೂ ಗೆಲ್ಲಬೇಕು ಎಂಬ ಹಠಕ್ಕೆ ಬಿದ್ದಿದೆ. ಮಾಜಿ ಸಚಿವ ರಮಾನಾಥ ರೈ, ವಿನಯ್ ಕುಮಾರ್ ಸೊರಕೆ ಮತ್ತು ಹಿರಿಯ ವಕೀಲ ಪದ್ಮರಾಜ್ ಅವರು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಒಂದು ವೇಳೆ, ಅರುಣ್ ಕುಮಾರ್ ಪುತ್ತಿಲ ಪಕ್ಷೇತರರಾಗಿ ಸ್ಪರ್ಧಿಸಿದರೆ, ಮತವಿಭಜನೆಯಾಗಿ ಅನಾಯಾಸವಾಗಿ ಗೆಲ್ಲಬಹುದೆಂಬ ಲೆಕ್ಕಾಚಾರ ಕಾಂಗ್ರೆಸ್ ಆಕಾಂಕ್ಷಿಗಳದ್ದು,


  ಇದರಲ್ಲಿ ಪ್ರಮುಖವಾಗಿ ಕೆಳಿ ಬರುತ್ತಿರುವ ಹೆಸರು ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರದ್ದು.ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಮೂಲದವರಾದ, ಬಿಲ್ಲವ ಸಮುದಾಯದ ವಿನಯ್ ಕುಮಾರ್ ಸೊರಕೆ 1985, 1989ರಲ್ಲಿ ಪುತ್ತೂರಿನಿಂದ ಶಾಸಕರಾಗಿದ್ದವರು. ಅದೇ ಕ್ಷೇತ್ರದಲ್ಲಿ ಸೋಲು ಕಂಡ ನಂತರ ಉಡುಪಿ ಜಿಲ್ಲಾ ರಾಜಕಾರಣದಲ್ಲಿ ತೊಡಗಿಸಿಕೊಂಡವರು. 1999ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಅದಾದ ನಂತರ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಒಂದು ಬಾರಿ ಗೆದ್ದಿದ್ದರೆ, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಸೋತಿದ್ದರು. ವಿನಯ್ ಕುಮಾರ್ ಸೊರಕೆ ಈ ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ.

  ಮತ್ತೊಂದು ಬಿಲ್ಲವ ಹೆಸರು ಪದ್ಮರಾಜ್ ಆರ್. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ಖ್ಯಾತ ವಕೀಲರು ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪದ್ಮರಾಜ್ ಆರ್, ಇವರು ಕೂಡಾ ಬಿಲ್ಲವ ಸಮುದಾಯದವರು. ಗುರು ಬೆಳದಿಂಗಳು ಸೇವಾ ಸಂಸ್ಥೆಯ ಅಧ್ಯಕ್ಷರಾಗಿ, ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಖಜಾಂಚಿಯಾಗಿಯೂ ಆಗಿರುವ ಪದ್ಮರಾಜ್ ಈ ಬಾರಿ ಲೋಕಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರು. ಇವರು ಜನಾರ್ಧನ ಪೂಜಾರಿಯವರ ಆಪ್ತರು ಕೂಡಾ..

  ಕರಾವಳಿಯ ಪ್ರಮುಖ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಬಂಟ್ಸ್ ಸಮುದಾಯದ ರಮಾನಾಥ್ ರೈ ಕೂಡಾ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಲ್ಲೊಬ್ಬರಾಗಿದ್ದಾರೆ. 1985 ರಿಂದ 1999ರವರೆಗೆ, ಮತ್ತು 2008 ಮತ್ತು 2013ರಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ರೈ, ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರಾದ ರೈ ಅವರೂ ಕೂಡಾ ಲೋಕಸಭಾ ಟಿಕೆಟಿಗಾಗಿ ಪ್ರಯತ್ನಿಸುತ್ತಿದ್ದಾರೆ.

   

  ಒಟ್ಟಾರೆಯಾಗಿ ಮೂರು ದಶಕಗಳ ಬಳಿಕ ಇದೀಗ ದಕ್ಷಿಣಕನ್ನಡ ಜಿಲ್ಲೆಯ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೇಸ್ ನಲ್ಲಿ ಆಕಾಂಕ್ಷಿಗಳ ಪಟ್ಟಿ ಇದೆ. ಹಿಂದೂ ಸಂಘಟನೆಗಳ ಮುಖಂಡರ ಬಂಡಾಯವನ್ನೇ ನೆಚ್ಚಿಕೊಂಡಿರುವ ಕಾಂಗ್ರೇಸ್ ಇಲ್ಲಿನ ಸೋಲಿನ ಸರಪಳಿಯನ್ನು ಈ ಬಾರಿಯಾದರೂ ಮುರಿಯುವುದೇ ಎನ್ನುವುದನ್ನು ಕಾದುನೋಡಬೇಕಿದೆ.

  Share Information
  Advertisement
  Click to comment

  You must be logged in to post a comment Login

  Leave a Reply