Connect with us

    LATEST NEWS

    ಲೋಕಸಭೆ ಚುನಾವಣೆ: ಕೊಯಮತ್ತೂರು ಕ್ಷೇತ್ರದಿಂದ ಅಣ್ಣಾಮಲೈ ಸ್ಪರ್ಧೆ

    ನವದೆಹಲಿ, ಮಾರ್ಚ್ 22: ತಮಿಳುನಾಡಿನ ಒಂಬತ್ತು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಗುರುವಾರ ಪ್ರಕಟಿಸಿದೆ. ಕೊಯಮತ್ತೂರು ಕ್ಷೇತ್ರದಿಂದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಹಾಗೂ ಚೆನ್ನೈ ದಕ್ಷಿಣ ಕ್ಷೇತ್ರದಿಂದ ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳ್‌ ಇಸೈ ಸೌಂದರ್‌ರಾಜನ್ ಸ್ಪರ್ಧಿಸಲಿದ್ದಾರೆ.

    ಬಿಜೆಪಿ ಈವರೆಗೆ 272 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದಂತಾಗಿದೆ. ಕೇಂದ್ರ ಸಚಿವ ಎಲ್‌.ಮುರುಗನ್ ಅವರು ನೀಲಗಿರಿ ಮೀಸಲು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಮಾದಿಗ ಸಮುದಾಯಕ್ಕೆ ಸೇರಿದ ಮುರುಗನ್‌ ಅವರು ಈ ಹಿಂದೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರು. ಬಳಿಕ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಗಿತ್ತು. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದಿಂದ ಅವರು ಆಯ್ಕೆಯಾಗಿದ್ದಾರೆ.

    ತಮಿಳ್‌ ಇಸೈ ಅವರು ಸೋಮವಾರವಷ್ಟೇ ರಾಜ್ಯ‍ಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದರು. ತಮಿಳ್‌ ಇಸೈ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ತೂತ್ತುಕುಡಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿ, ಡಿಎಂಕೆಯ ಕನಿಮೊಳಿ ಎದುರು ಪರಾಭವಗೊಂಡಿದ್ದರು. ಕೊಯಮತ್ತೂರು ಕ್ಷೇತ್ರದಲ್ಲಿ 2019ರಲ್ಲಿ ಕಾಂಗ್ರೆಸ್‌ ಜಯ ಗಳಿಸಿತ್ತು. ಈ ಸಲ ಕ್ಷೇತ್ರವನ್ನು ಡಿಎಂಕೆಗೆ ಬಿಟ್ಟುಕೊಟ್ಟಿದೆ.

    ಕೇಂದ್ರದ ಮಾಜಿ ಸಚಿವ ಪೊನ್‌ ರಾಧಾಕೃಷ್ಣನ್‌ ಅವರು ಕನ್ಯಾಕುಮಾರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಡಿಎಂಕೆ ಮಾಜಿ ನಾಯಕ ಹಾಗೂ ಹಾಲಿ ಸಂಸದ ಟಿ.ಆರ್.ಪರಿವೆಂಧರ್‌ ಅವರು ಪೆರಂಬಲೂರಿನಿಂದ ಕಣಕ್ಕಿಳಿಯಲಿದ್ದಾರೆ.

    2019ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನು ಗೆದ್ದಿರಲಿಲ್ಲ. ರಾಜ್ಯದ 39 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಏಪ್ರಿಲ್‌ 19ರಂದು ಮತದಾನ ನಡೆಯಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply