KARNATAKA
ಮುಂದಿನ ವಾರದ ಯಾವುದೇ ದಿನ ಲೋಕಸಭೆ ಚುನಾವಣೆ ದಿನಾಂಕ ಪ್ರಕಟ ಸಾಧ್ಯತೆ..!

ನವದೆಹಲಿ : ಭಾರತೀಯ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಯ ದಿನಾಂಕಗಳನ್ನು ಮುಂದಿನ ವಾರದ ಯಾವುದೇ ದಿನದಲ್ಲೂ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಸೆಪ್ಟೆಂಬರ್‌ನೊಳಗೆ ವಿಧಾನಸಭೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ನಂತರ ಆಯೋಗ ಸೋಮವಾರ ಅಲ್ಲಿಗೆ ಭೇಟಿ ನೀಡುತ್ತಿದೆ. ಈ ಮಧ್ಯೆ, ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಯನ್ನು ಲೋಕಸಭೆ ಚುನಾವಣೆಯೊಂದಿಗೆ ಏಕಕಾಲದಲ್ಲಿ ನಡೆಸಬಹುದೇ ಎಂದು ನಿರ್ಣಯಿಸಲು ಕೇಂದ್ರವು ಸಮಿತಿಯನ್ನು ಕೇಳಿತ್ತು. ಅಂತಿಮ ಹಂತದ ಪರಿಶೀಲನೆಗಳನ್ನು ಪೂರ್ಣಗೊಳಿಸಿಕೊಂಡು, ಜಮ್ಮು ಕಾಶ್ಮೀರ ಭೇಟಿ ಮುಕ್ತಾಯಗೊಂಡ ನಂತರ ಚುನಾವಣಾ ಆಯೋಗವು ಗುರುವಾರ ಅಥವಾ ಶುಕ್ರವಾರ ಲೋಕಸಭೆ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಬಹುದು ಎಂದು ರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿವೆ. ಚುನಾವಣೆ ಘೋಷಣೆಯಾದ ತಕ್ಷಣ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಈಗಾಗಲೇ ರಾಜಕೀಯ ಪಕ್ಷಗಳು ಮತದಾರರಿಗೆ ಭರವಸೆಗಳನ್ನು ನೀಡುತ್ತಿದ್ದು, ಯೋಜನೆಗಳನ್ನು ಉದ್ಘಾಟನೆ ಮಾಡುತ್ತಿವೆ. ಜಮ್ಮು ಮತ್ತು ಕಾಶ್ಮೀರದ ಚುನಾವಣೆಗೆ ಸಂಬಂಧಿಸಿದಂತೆ, ಭದ್ರತಾ ವ್ಯವಸ್ಥೆ ಬಗ್ಗೆ ಆಯೋಗಕ್ಕೆ ಈಗಾಗಲೇ ಸಂಪೂರ್ಣ ಮಾಹಿತಿ ನೀಡಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಸೇರಿದಂತೆ ಇಡೀ ಸಮಿತಿಯು ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಯ ಅಸೆಂಬ್ಲಿ ಚುನಾವಣೆಗಳು 2014 ರಲ್ಲಿ ನಡೆದಿದ್ದವು.
