Connect with us

    DAKSHINA KANNADA

    ದೇಶದೆಲ್ಲೆಡೆ ಮೇ 3 ರ ತನಕ ಲಾಕ್ ಡೌನ್ ಮುಂದುವರಿಕೆ, ಲಾಕ್ ಡೌನ್ ಸಮಯದಲ್ಲಿ ಸಪ್ತಪದಿ ಮೀರದಂತೆ ಪ್ರಧಾನಿ ಮೋದಿ ಮನವಿ

     

    ದೇಶದೆಲ್ಲೆಡೆ ಮೇ 3 ರ ತನಕ ಲಾಕ್ ಡೌನ್ ಮುಂದುವರಿಕೆ, ಲಾಕ್ ಡೌನ್ ಸಮಯದಲ್ಲಿ ಸಪ್ತಪದಿ ಮೀರದಂತೆ ಪ್ರಧಾನಿ ಮೋದಿ ಮನವಿ

    ದೇಶದಾದ್ಯಂತ ಕೊರೊನಾ ಲಾಕ್ ಡೌನ್ ಮೇ 3 ರ ವರೆಗೆ ಮುಂದುವರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.

    ದೇಶವನ್ನುದ್ದೇಶಿಸಿ ಮಾತನಾಡಿದ ಅವರು ಮುಂದಿನ ಮೇ 3 ರ ವರೆಗೆ ದೇಶದ ಎಲ್ಲಾ ನಾಗರಿಕರೂ ಸಪ್ತಪದಿಯ ಮೂಲಕ ದೇಶವನ್ನು ಕೊರೊನಾ ಮುಕ್ತವಾಗಿಸುವಲ್ಲಿ ಪ್ರಯತ್ನಿಸಬೇಕೆಂದು ಅವರು ಕರೆ ನೀಡಿದರು.

     

    ವಿಶ್ವದ ಇತರ ದೇಶಗಳನ್ನು ಹೋಲಿಸಿದರೆ ಭಾರತ ಕೊರೊನಾ ರೋಗ ನಿಯಂತ್ರಣದಲ್ಲಿ ಮುಂದಿದ್ದು, ಅಪಾಯಕ್ಕೆ ಮುಂಚಿತವಾಗಿಯೇ ಲಾಕ್ ಡೌನ್ ನಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡ ಪರಿಣಾಮವೇ ಇದಕ್ಕೆ ಕಾರಣ ಎಂದು ಅವರು ಹೇಳಿದರು.

    ಲಾಕ್ ಡೌನ್ ನಿರ್ಧಾರ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಕೆಟ್ಟ ಪರಿಣಾಮವನ್ನು ಬೀರಲಿದೆ ಎನ್ನುವುದನ್ನು ತಿಳಿದೂ ದೇಶದ ಜನರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

    ದೇಶದಲ್ಲಿ ಈಗಾಗಲೇ ಗುರುತಿಸಲಾಗಿರುವ ಕೊರೊನಾ ಹಾಟ್ ಸ್ಪಾಟ್ ಗಳಲ್ಲಿ ಕೊರೊನಾ ಸೋಂಕನ್ನು ಗುರುತಿಸಿ ಅಲ್ಲಿಗೇ ಅದನ್ನು ನಿಯಂತ್ರಿಸುವ ಪ್ರಯತ್ನಗಳ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಆ ಹಾಟ್ ಸ್ಪಾಟ್ ಗಳಿಂದ ಕೊರೊನಾ ಇತರ ಪ್ರದೇಶಗಳಿಗೆ ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

    ದೇಶದಲ್ಲಿ ಲಾಕ್ ಡೌನ್ ಮುಂದುವರಿಸಬೇಕು ಎನ್ನುವ ಒತ್ತಾಯ ಹಲವು ರಾಜ್ಯಗಳಿಂದ ಬಂದ ಪರಿಣಾಮ ಹಾಗೂ ಈಗಾಗಲೇ ಹಲವು ರಾಜ್ಯಗಳು ಲಾಕ್ ಡೌನ್ ಅನ್ನು ಮುಂದುವರಿಸಿರುವುದನ್ನು ದೃಷ್ಟಿಯಲ್ಲಿಟ್ಟು ಮೇ 3 ರ ವರೆಗೆ ಲಾಕ್ ಡೌನ್ ಮುಂದುವರಿಸಲು ನಿರ್ಧರಿಸಲಾಗಿದೆ ಎಂದರು.

    ಯಾವ ಪ್ರದೇಶದಲ್ಲಿ ಕೊರೊನಾ ಸೋಂಕಿನ ಸಂಪೂರ್ಣ ನಿಯಂತ್ರಣದಲ್ಲಿದೆಯೋ ಅಂಥ ಪ್ರದೇಶಗಳನ್ನು ಎಪ್ರಿಲ್ 20 ರ ವರೆಗೆ ಪರಿಶೀಲನೆ ನಡೆಸಿ ಅಂಥ ಪ್ರದೇಶಗಳಲ್ಲಿ ಕೆಲವು ಚಟುವಟಿಕೆಗಳಿಗೆ ಲಾಕ್ ಡೌನ್ ನಿಂದ ವಿನಾಯತಿ ನೀಡುವ ಬಗ್ಗೆಯೂ ಚಿಂತಿಸಲಾಗುವುದು ಎಂದು ಅವರು ಹೇಳಿದರು.

    ದೇಶದಲ್ಲಿರುವ ಬಡ ಕೂಲಿ ಕಾರ್ಮಿಕರಿಗೆ , ಬಡ ವರ್ಗದ ಕುಟುಂಬಗಳಿಗೆ ಯಾವುದೇ ತೊಂದರೆಯಾಗದಂತೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಲ್ಲಿ ಹಲವು ಸೌಲಭ್ಯಗಳನ್ನು ನೀಡಲಾಗುವುದು ಎಂದ ಅವರು ದೇಶದ ಜನತೆಯಲ್ಲಿ ತಾನು ಏಳು ವಿನಂತಿಗಳನ್ನು ಮಾಡಲಿದ್ದು, ಇವುಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

    ಈ ಏಳು ಮನವಿಗಳನ್ನು ಸಪ್ತಪದಿಗಳೆಂದು ವ್ಯಾಖ್ಯಾನಿಸಿದ ಅವರು

    1.ಲಾಕ್ ಡೌನ್ ಮುಗಿಯುವವರೆಗೆ ಪ್ರತಿಯೊಬ್ಬ ಕುಟುಂಬದ ಸದಸ್ಯರು ತಮ್ಮ ಮನೆಯಲ್ಲಿರುವ ಹಿರಿಯರ ಬಗ್ಗೆ ಕಾಳಜಿ ವಹಿಸಿ, ಅವರ ಆರೋಗ್ಯದ ಬಗ್ಗೆ ಗಮನ ಹರಿಸಿ

    2. ಸರಕಾರ ಜಾರಿಗೆ ತಂದ ಲಾಕ್ ಡೌನ್ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿ

    3. ಕೇಂದ್ರ ಸರಕಾರದ ಆಯುಷ್ ಇಲಾಖೆ ನೀಡುವ ಸೂಚನೆಯನ್ನು ಪಾಲಿಸಿ, ಆದಷ್ಟು ರೋಗ ನಿರೋಧಕ ಶಕ್ತಿಗಳನ್ನು ಬೆಳೆಸಿಕೊಳ್ಳಿ, ಬಿಸಿ ನೀರನ್ನೇ ಕುಡಿಯಿರಿ.

    4. ಕೇಂದ್ರ ಸರಕಾರದ ಆರೋಗ್ಯ ಸೇತು ಆ್ಯಪನ್ನು ಪ್ರತಿಯೊಬ್ಬರೂ ಡೌನ್ ಲೋಡ್ ಮಾಡಿಕೊಳ್ಳಿ, ಇದರಿಂದ ನಿಮ್ಮ ನಡುವೆ ಇರುವ ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ಸಾಧ್ಯ

    5. ನಿಮ್ಮ ಆಸುಪಾಸಿನಲ್ಲಿರುವ ಬಡ ಕುಟುಂಗಳ ಬಗ್ಗೆ ಕಾಳಜಿಯಿರಲಿ, ಅಂಥ ಕುಟುಂಬಗಳಿಗೆ ಲಾಕ್ ಡೌನ್ ಸಂದರ್ಭದಲ್ಲಿ ಅನ್ನ-ನೀರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ.

    6. ದೇಶದಲ್ಲಿ ಎಲ್ಲಾ ಉದ್ಯೋಗಪತಿಗಳು ತಮ್ಮ ಕೈಕೆಳಗೆ ಕೆಲಸ ಮಾಡುವ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯದೆ ಮಾನವೀಯತೆಯನ್ನು ಪ್ರದರ್ಶಿಸಿ.

    7. ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ದುಡಿಯುವ ವೈದ್ಯರು, ನರ್ಸ್, ಪೋಲೀಸ್, ಸಫಾಯಿ ಕರ್ಮಚಾರಿಗಳನ್ನು ಗೌರವದಿಂದ ಕಾಣಿರಿ.

    ಈ ಸಪ್ತಪದಿಗಳನ್ನು ಪ್ರತಿಯೊಬ್ಬರು ಲಾಕ್ ಡೌನ್ ಅವಧಿಯಲ್ಲಿ ಪಾಲಿಸಿಕೊಂಡಲ್ಲಿ ದೇಶ ಖಂಡಿತವಾಗಿಯೂ ಕೊರೊನಾ ಮಹಾಮಾರಿಯಿಂದ ಮುಕ್ತಿ ಹೊಂದಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply