LATEST NEWS
ಲೋನ್ ಆ್ಯಪ್ ಮೂಲಕ ಸಾಲಪಡೆದ ಯುವತಿಗೆ ಎಡಿಟೆಡ್ ನಗ್ನ ಚಿತ್ರ ವೈರಲ್ ಮಾಡುವುದಾಗಿ ಬೆದರಿಕೆ
ಮಂಗಳೂರು ಅಗಸ್ಟ್ 25: ಆನ್ ಲೈನ್ ನಲ್ಲಿ ಲೋನ್ ಆ್ಯಪ್ ಮೂಲಕ ಸಾಲ ಪಡೆದ ಯುವತಿಗೆ ಆಕೆಯ ಎಡಿಟೆಡ್ ನಗ್ನ ಚಿತ್ರ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ ಯುವತಿಯೊಬ್ಬಳು ಏಪ್ರಿಲ್ 15ರಂದು ಲೋನ್ ಆ್ಯಪ್ ಡೌನ್‌ಲೋಡ್ ಮಾಡಿದ್ದಳು. ಅದರಲ್ಲಿ 10 ಸಾವಿರ ರೂಪಾಯಿ ಸಾಲಕ್ಕೆ ಅಪ್ಲೈ ಮಾಡಿ, ಆಕೆಗೆ ಬಡ್ಡಿ ಕಟ್ ಆಗಿ 7500 ರೂ. ಜಮೆ ಆಗಿತ್ತು. ಕೆಲವು ದಿನಗಳ ಅನಂತರ ಅದನ್ನು ಮರುಪಾವತಿ ಮಾಡಿದ್ದಳು. ಆ ಬಳಿಕ ಹಲವು ವಾಟ್ಸಾಪ್ ಸಂಖ್ಯೆಗಳಿಂದ ಕರೆ ಮಾಡಿದ ಅಪರಿಚಿತರು ಕಡ್ಡಾಯವಾಗಿ ಪುನಃ ಸಾಲ ಪಡೆಯಬೇಕು ಎಂದು ಒತ್ತಾಯಿಸಿದರು.
ಅಲ್ಲದೆ ತನ್ನ ಖಾತೆಗೆ 14,000 ರೂ. ಜಮೆ ಮಾಡಿದ್ದರು. ಅದನ್ನು ಕೂಡ ತಾನು ಮರುಪಾವತಿ ಮಾಡಿದ್ದೆ. ಆ ಬಳಿಕವೂ ತನಗೆ ಕರೆ ಮಾಡಿದ ಅಪರಿಚಿತರು ಹೆಚ್ಚಿನ ಹಣ ಪಾವತಿ ಮಾಡುವಂತೆ ಒತ್ತಾಯಿಸಿದರಲ್ಲದೆ ತನ್ನ ಖಾತೆಯಿಂದ 51,000 ರೂ. ವರ್ಗಾಯಿಸಿಕೊಂಡರು. ಅಲ್ಲದೆ ಮತ್ತಷ್ಟು ಹಣ ನೀಡುವಂತೆ ಒತ್ತಾಯಿಸಿದರು. ಒಂದು ವೇಳೆ ಹಣ ನೀಡದಿದ್ದರೆ ನಿನ್ನ ಫೋಟೊವನ್ನು ಹುಡುಗನೊಂದಿಗೆ ನಗ್ನವಾಗಿ ಇರುವಂತೆ ಎಡಿಟ್ ಮಾಡಿ ನಿನ್ನ ಸ್ನೇಹಿತರು, ಸಂಬಂಧಿಕರಿಗೆ ಕಳುಹಿಸುವುದಾಗಿ, ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಸೆನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.