DAKSHINA KANNADA
ಮಂಗಳೂರಿನಲ್ಲಿ ಪ್ರಧಾನಿ ಮೋದಿ ಉದ್ಘಾಟಿಸುವ ಕಾರ್ಯಕ್ರಮಗಳ ಪಟ್ಟಿ ಜನತೆಯ ಮುಂದಿಡಿ- ವಿಪಕ್ಷ ಉಪನಾಯಕ ಯು.ಟಿ.ಖಾದರ್
ಪುತ್ತೂರು, ಆಗಸ್ಟ್ 30: ಪ್ರಧಾನಿ ನರೇಂದ್ರ ಮೋದಿ ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸಲಿದ್ದು, ಅವರನ್ನು ಜಿಲ್ಲೆಯ ಜನತೆಯ ಪರವಾಗಿ ಸ್ವಾಗತಿಸುತ್ತೇವೆ, ಆದರೆ ಪ್ರಧಾನಿಯವರು ಚಾಲನೆ ನೀಡಲಿರುವ ಬಿಜೆಪಿಯವರು ಪ್ರಚಾರಪಡಿಸುತ್ತಿರುವ 4000 ಕೋಟಿ ಕಾಮಗಾರಿ ಯಾವುದು ಎನ್ನುವುದನ್ನು ಜನತೆಯ ಮುಂದೆ ಪ್ರಸ್ತುತಪಡಿಸಬೇಕು ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದರು.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಗೆ ಪ್ರಧಾನಿಗಳು ಆಗಮಿಸುವ ಸಂದರ್ಭದಲ್ಲಿ ಕೆಲವೊಂದು ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಆ ಸಮಯದಲ್ಲಿ ಕಾರ್ಯಕ್ರಮಗಳ ಎಲ್ಲಾ ವಿವರಗಳನ್ನು ಜನರ ಮುಂದೆ ವಿವರಿಸಲಾಗುತ್ತಿತ್ತು.
ಆದರೆ ಪ್ರಧಾನಿ ಮೋದಿ ಬರುವ ಕಾರ್ಯಕ್ರಮದಲ್ಲಿ 4000 ಕೋಟಿ ಕಾಮಗಾರಿಗೆ ಚಾಲನೆ ನೀಡುತ್ತಾರೆ ಎಂದು ಬಿಜೆಪಿಯವರು ಕೇವಲ ಪತ್ರಿಕೆಗಳಲ್ಲಿ ಪ್ರಚಾರ ಮಾಡುತ್ತಿದ್ದು, ಯಾವ ಕಾಮಗಾರಿ ಎನ್ನುವುದನ್ನು ಜನತೆಗೆ ತಿಳಿಸಿಲ್ಲ ಎಂದು ಆರೋಪಿಸಿದರು. ದೇಶದ ಜನ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದರೂ, ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಇದರ ಯಾವುದೇ ಗೋಚರವೇ ಇಲ್ಲ ಎಂದು ದೂರಿದ ಅವರು ದಕ್ಷಿಣಕನ್ನಡ ಜಿಲ್ಲೆಯ ಜನ ಬೆಲೆ ಏರಿಕೆಯಿಂದ ತತ್ತರಿಸಿದ್ದು, ಯುವಕರು ಉದ್ಯೋಗವಿಲ್ಲದೆ ಅಲೆದಾಡುವಂತಹ ಸ್ಥಿತಿಯಲ್ಲಿದ್ದಾರೆ. ರಾಜ್ಯ ಸರಕಾರ ಕೋಮುವಾದಿಗಳು ನಡೆಸುತ್ತಿರುವ ದುಷ್ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.