Connect with us

UDUPI

ಚೌಳಿಕೆರೆ ಕಾರು ಅಪಘಾತದಲ್ಲಿ ಜೀವದ ಹಂಗು ತೊರೆದು ಕೆರೆಗೆ ಧುಮುಕಿ ಜೀವ ಉಳಿಸಿದ ಅಪತ್ಬಾಂಧವರು ಇವರು….!!

ಉಡುಪಿ ಜೂನ್ 23: ಜೂನ್ 21ರಂದು ಬಾರ್ಕೂರಿನ ಚೌಳಿಕೆರೆಗೆ ಕಾರು ಉರುಳಿ ಬಿದ್ದು ಅಪಘಾತ ಸಂಭವಿಸಿದ ಸಂದರ್ಭ ಇಬ್ಬರು ಯುವಕರು ನೀರಿಗೆ ಹಾರಿ ಕಾರಿನಲ್ಲಿದ್ದವರ ಜೀವ ಉಳಿಸಲು ಯತ್ನಿಸಿರುವುದಕ್ಕೆ ಈಗ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಅದರಲ್ಲೂ ಹೂಳು ತುಂಬಿದ್ದ ಆ ಕೆರೆಗೆ ಉರುಳಿ ತಲೆಕೆಳಗಾಗಿದ್ದ ಕಾರಿನಿಂದ ಇಬ್ಬರನ್ನು ಹೊರಗೆಳೆದ ಯುವಕರಿಬ್ಬರ ಶೌರ್ಯ ಇದೀಗ ಸ್ಥಳೀಯವಾಗಿ ಭಾರೀ ಪ್ರಸಂಶೆಗೆ ಪಾತ್ರವಾಗುತ್ತಿದೆ. ಬಾರ್ಕೂರಿನವರೇ ಆಗಿರುವ ಪ್ರವೀಣ್ ಪೂಜಾರಿ ಹಾಗೂ ಪ್ರದೀಪ್ ದೇವಾಡಿಗ ಎಂಬ ಇಬ್ಬರು ಯುವಕರೇ ಸಕಾಲಿಕ ಸಮಯಪ್ರಜ್ಞೆ ಮೆರೆದು ಅಮೂಲ್ಯ ಜೀವದ ಉಳಿವಿಗೆ ಕಾರಣರಾದವರು.


ಜೂನ್ 21 ರಂದು ಬೀಜಾಡಿಯ ಲಕ್ಷ್ಮೀ ಗ್ಲಾಸ್ & ಪ್ಲೈವುಡ್‌ನ ಸಂತೋಷಕುಮಾರ್ ಶೆಟ್ಟಿ ಹಾಗೂ ಶ್ವೇತ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರಿನ ನಿಯಂತ್ರಣ ತಪ್ಪಿ ಬಾರ್ಕೂರಿನ ಚೌಳಿಕೆರೆಗೆ ಬಿದ್ದು ಸಂತೋಷ ಶೆಟ್ಟಿ ಸಾವನ್ನಪ್ಪಿದರು. ಕಾರಿನಲ್ಲಿದ್ದ ಅಂಗಡಿಯ ಕೆಲಸದಾಕೆ ಶ್ವೇತ ಶೆಟ್ಟಿ ಈಗ ಮಣಿಪಾಲದಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ. ಅಪಘಾತ ನಡೆದ ತಕ್ಷಣ ಹತ್ತಾರು ಮಂದಿ ಸೇರಿ ಬೊಬ್ಬೆ ಹೊಡೆಯುತ್ತಿದ್ದು ಯಾರೂ ಕೂಡ ಕೆರೆಗೆ ಧುಮುಕದೇ ಇದ್ದ ಸಂದರ್ಭದಲ್ಲಿ ಪ್ರದೀಪ್ ದೇವಾಡಿಗ ಹಾಗೂ ಪ್ರವೀಣ್ ಪೂಜಾರಿ ಎಂಬ ಯುವಕರಿಬ್ಬರು ಜೀವದ ಹಂಗು ತೊರೆದು ಕೆರೆಗೆ ಧುಮುಕಿ ಕಾರಿನ ಡೋರನ್ನು ಒಡೆಯುವ ಸಾಹಸವನ್ನು ಮಾಡಿದ್ದಾರೆ.

ಮಾತ್ರವಲ್ಲದೇ ಅದರ ಒಳಗಿದ್ದವರನ್ನು ಹೊರಗೆಳೆಯುವ ಸಾಹಸಕ್ಕೂ ಕೈ ಹಾಕಿದ್ದಾರೆ. ನೀರು ಕುಡಿದು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ಹೊರಗೆಳೆದ ಈ ಇಬ್ಬರು ಯುವಕರು ಆಕೆಯನ್ನು ಇನ್ನೊಬ್ಬ ಯುವಕನ ಮೂಲಕ ಕೆರೆಯ ದಡಕ್ಕೆ ಸಾಗಿಸಿದ್ದಾರೆ.
ಅಲ್ಲಿ ಈ ಯುವತಿಗೆ ನಮನಾ ಎಂಬ ವಿದ್ಯಾರ್ಥಿನಿ ಸಹಿತ ಉಳಿದವರು ಪ್ರಥಮ ಚಿಕಿತ್ಸೆ ಮಾಡಿ ಆಕೆಯ ಹೊಟ್ಟೆಯಲ್ಲಿದ್ದ ನೀರನ್ನು ಹೊರ ಹಾಕಿ, ಮೈಯನ್ನು ಬೆಚ್ಚಗಾಗಿಸುವ ಮೂಲಕ ಆಕೆಯ ಜೀವವನ್ನು ಉಳಿಸುವ ಪ್ರಾಥಮಿಕ ಕೆಲಸವನ್ನು ಮಾಡಿದ್ದಾರೆ.


ಬಳಿಕ ಕಾರಿನಲ್ಲಿದ್ದ ವಕ್ವಾಡಿಯ ಉದ್ಯಮಿ ಸಂತೋಷ್ ಶೆಟ್ಟಿ ಅವರನ್ನೂ ಸಹ ಈ ಯುವಕರು ಕಷ್ಟಪಟ್ಟು ಕಾರಿನಿಂದ ಹೊರಗೆಳೆದರಾದರೂ ಸಂತೋಷ್ ಅವರು ಆಗಲೇ ತೀವ್ರ ಅಸ್ವಸ್ಥಗೊಂಡಿದ್ದರು ಮತ್ತು ಅವರನ್ನು ಉಳಿಸಿಕೊಳ್ಳುವ ಪ್ರಯತ್ನಗಳು ಫಲನೀಡಿಲ್ಲ.
ಈ ನಡುವೆ ಸಮಯಕ್ಕೆ ಸರಿಯಾಗಿ ಪ್ರಥಮ ಚಿಕಿತ್ಸೆ ನೀಡಿ ಯುವತಿಯನ್ನು ಬದುಕಿಸಲು ನೆರವಾದ ವಿಧ್ಯಾರ್ಥಿನಿ ನಮನ ಅವರ ವಿಡಿಯೋ ವೈರಲ್ ಆಗಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಆದರೆ ಕೆಸರು ತುಂಬಿದ ಕೆರೆಗೆ ಧುಮುಕಿ ಕಾರಿನಲ್ಲಿದ್ದವರನ್ನು ಸಾಹಸದಿಂದ ಹೊರಗೆಳೆದ ಈ ಇಬ್ಬರು ಯುವಕರ ಕುರಿತಾದ ಮಾಹಿತಿ ಇಂದು ತಡವಾಗಿ ಬೆಳಕಿಗೆ ಬಂದಿದೆ ಮತ್ತು ಈ ಇಬ್ಬರು ಯುವಕರ ಸಮಯಪ್ರಜ್ಞೆ ಹಾಗೂ ಸಾಹಸ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಲಭಿಸುತ್ತಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *