LATEST NEWS
ಎಲ್‌ಐಸಿ ಖಾಸಗೀಕರಣಕ್ಕೆ ಚಾಲನೆ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಸಾರ್ವಜನಿಕ ವಲಯದ ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ) ಖಾಸಗೀಕರಣ ಮಾಡುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. ಇದಕ್ಕಾಗಿ ಸಂಬಂಧಿಸಿದ ಕಾನೂನಿಗೆ ತಿದ್ದುಪಡಿ ತರಲು ಸಜ್ಜಾಗಿದೆ.
ಆರಂಭದಲ್ಲಿ ಶೇ. 10 ಷೇರುಗಳನ್ನು ಮಾರಲು ನಿರ್ಧರಿಸಿದ್ದ ಕೇಂದ್ರ ಸರ್ಕಾರ, ನಂತರ ಇದನ್ನು ಶೇ. 25ಕ್ಕೆ ಏರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವಾಲಯ ತಯಾರಿಸಿದ ಕರಡನ್ನು ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ (ಐಆರ್‌ಡಿಎ), ಭಾರತೀಯ ಷೇರು ಮಾರುಕಟ್ಟೆ ಮಂಡಳಿ (ಸೆಬಿ), ಸಂಬಂಧಿಸಿದ ಇಲಾಖೆಗಳು ಮತ್ತು ನೀತಿ ಆಯೋಗಕ್ಕೆ ಸಲ್ಲಿಸಿದೆ. ಜೆಟ್ ಅಂತರ ಜಾಸ್ತಿಯಾಗುತ್ತಿದ್ದು ಅದನ್ನು ಎಲ್‌ಐಸಿಯ ಷೇರುಗಳ ಮಾರಾಟದಿಂದ ಸರಿಪಡಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಎಲ್‌ಐಸಿ ಮಾತ್ರವಲ್ಲದೆ, ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದ (ಐರ್‌ಸಿಟಿಸಿ) ಶೇ. 20ರಷ್ಟು ಷೇರುಗಳನ್ನು ಕೂಡ ಮುಂದಿನ ದಿನಗಳಲ್ಲಿ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ‘‘ಸರ್ಕಾರವನ್ನು ಮಾರಾಟ ಮಾಡುವ ಕಂಪನಿ ಆಂದೋಲನ ಇದು. ದೇಶದಲ್ಲಿ ಆಗಿರುವ ಆರ್ಥಿಕ ದುರಂತವನ್ನು ಸರಿದೂಗಿಸಲು ಅದು ಹೀಗೆ ಮಾಡುತ್ತಿದೆ’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.