LATEST NEWS
ಉಡುಪಿ – ಕೊನೆಗೂ ಸೆರೆಸಿಕ್ಕ ಮನೆಯೊಳಗೆ ಅಡಗಿ ಕುಳಿತಿದ್ದ ಚಿರತೆ
ಉಡುಪಿ ಸೆಪ್ಟೆಂಬರ್ 08: ಮನೆಯೊಳಗೆ ಅಡಗಿ ಕುಳಿತಿದ್ದ ಚಿರತೆಯನ್ನು ದಿನವೀಡಿ ಕಾರ್ಯಾಚರಣೆ ನಡೆಸಿ ಕೊನೆಗೂ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಉಡುಪಿ ಜಿಲ್ಲೆಯ ಹಿರಿಯಡ್ಕ ಪೇಟೆಯ ಸಮೀಪದ ಮನೆಯೊಂದರಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಚಿರತೆ ಅವಿತಿರುವ ಮಾಹಿತಿಯನ್ನು ಅರಣ್ಯಾಧಿಕಾರಿಗಳಿಗೆ ನೀಡಲಾಗಿತ್ತು. ಚಿರತೆ ಇರುವ ಸಂಗತಿ ತಿಳಿದು ಸ್ಥಳೀಯರೆಲ್ಲ ಬಂದು ಮನೆಯ ಸುತ್ತಮುತ್ತ ಸೇರಿದ್ದರು. ಚಿರತೆ ಸೆರೆ ಹಿಡಿಯಲು ಸಾರ್ವಜನಿಕರ ನೆರವಿನೊಂದಿಗೆ ಅರಣ್ಯ ಇಲಾಖೆಯವರು ಮುಂದಾದರು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಮನೆಯೊಳಗೆ ಅವಿತು ಕುಳಿತಿದ್ದ ಚಿರತೆಯನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.
ಅರವಳಿಕೆ ತಜ್ಞರು ಸ್ಥಳಕ್ಕೆ ಬಂದು ಚಿರತೆಗೆ ಚುಚ್ಚುಮದ್ದು ಹಾಕಲು ನಡೆಸಿದ ಒಂದೆರಡು ಪ್ರಯತ್ನಗಳು ವಿಫಲವಾದವು. ಸಂಜೆಯ ವೇಳೆಗೆ ಕೊನೆಗೂ ಚಿರತೆಗೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸುವಲ್ಲಿ ಅರಣ್ಯ ಅಧಿಕಾರಿಗಳು ಯಶಸ್ವಿಯಾದರು. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಹೆಲ್ಮೆಟ್ ಧರಿಸಿ ಮನೆಯೊಳಗೆ ತೆರಳಿ ಮತ್ತೊಮ್ಮೆ ಚುಚ್ಚುಮದ್ದು ಹಾಕಿ ಚಿರತೆಯನ್ನು ಸುರಕ್ಷಿತವಾಗಿ ಮನೆಯಿಂದ ರಕ್ಷಿಸಲಾಯಿತು.
ಸುಮಾರು ಮೂರು ವರ್ಷ ಪ್ರಾಯದ ಈ ಗಂಡು ಚಿರತೆಗೆ ಮೈತುಂಬಾ ಗಾಯಗಳಾಗಿವೆ. ಐದಾರು ದಿನಗಳ ಮುಂಚೆ ಈ ಮನೆಯೊಳಗೆ ಚಿರತೆ ನುಗ್ಗಿರುವ ಸಾಧ್ಯತೆ ಇದ್ದು, ಸರಿಯಾದ ಆಹಾರ ಸಿಗದೇ ಕಂಗಾಲಾಗಿತ್ತು. ಅದೃಷ್ಟವಶಾತ್ ಈ ಮನೆಯಲ್ಲಿ ಯಾರು ವಾಸವಿಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.
https://youtu.be/RNvv0mf07Ws