ಮಲಗಿದ್ದ ಮಗುವನ್ನು ಹೊತ್ತೊಯ್ದು ತಿಂದ ಚಿರತೆ

ರಾಮನಗರ :ಮನೆಯಲ್ಲಿ ಮಲಗಿದ್ದ 3 ವರ್ಷದ ಮಗುವನ್ನು ಚಿರತೆಯೊಂದು ಹೊತ್ತೊಯ್ದು ಕೊಂದು ತಿಂದಿರುವ ಘಟನೆ ಮಾಗಡಿ ತಾಲೂಕಿನ ಕದಿರಯ್ಯನಪಾಳ್ಯ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಚಂದ್ರಣ್ಣ ಹಾಗೂ ಮಂಗಳಗೌರಮ್ಮ ದಂಪತಿಯ ಮಗನಾದ ಹೇಮಂತ್ ಚಿರತೆ ದಾಳಿಗೆ ಬಲಿಯಾಗಿದ್ದಾನೆ. ಬೇಸಿಗೆ ಕಾಲವಿದ್ದರಿಂದ ಸೆಕೆ ಹೆಚ್ಚಾದ ಹಿನ್ನೆಲೆಯಲ್ಲಿ ದಂಪತಿ ಬಾಗಿಲು ತೆರೆದು ಮಲಗಿದ್ದರು. ಈ ವೇಳೆ ಏಕಾಏಕೀ‌ ಮನೆಗೆ ನುಗ್ಗಿದ ಚಿರತೆ ಮಗುವನ್ನು ಹೊತ್ತೊಯ್ದಿದೆ. ಎಚ್ಚರಗೊಂಡ ಬಳಿಕ ಪೋಷಕರು ಆತನನ್ನು‌ ಹುಡುಕಲು ಆರಂಭಿಸಿದ್ದಾಗ ಮನೆಯಿಂದ ಸ್ವಲ್ಪ ದೂರದ ಪೊದೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ.

ತಡರಾತ್ರಿ ಮಳೆಯಾದ ಹಿನ್ನೆಲೆಯಲ್ಲಿ ಮನೆಯಲ್ಲಿ ವಿದ್ಯುತ್ ಇಲ್ಲದಿರುವುದರಿಂದ ದಂಪತಿ ಬಾಗಿಲು ತೆರೆದು ಮಲಗಿದ್ದರು‌ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ‌ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಮಾಗಡಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.