LATEST NEWS
ಕುಂದಾಪುರದಲ್ಲಿ ಮಹಿಳೆ ಮೇಲೆ ಚಿರತೆ ದಾಳಿ ಆತಂಕದಲ್ಲಿ ಸ್ಥಳೀಯರು

ಕುಂದಾಪುರದಲ್ಲಿ ಮಹಿಳೆ ಮೇಲೆ ಚಿರತೆ ದಾಳಿ ಆತಂಕದಲ್ಲಿ ಸ್ಥಳೀಯರು
ಉಡುಪಿ ಮಾರ್ಚ್ 4: ಹಾಲು ಡೈರಿಗೆ ಹಾಲು ಕೊಡಲು ತೆರಳುತ್ತಿದ್ದ ಮಹಿಳೆಯ ಮೇಲೆ ಚಿರತೆಯೊಂದು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಕುಂದಾಪುರದಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಕುಂದಾಪುರದ ಜಪ್ತಿ ಎಂಬಲ್ಲಿ ಈ ಘಟನೆ ನಡೆದಿದೆ. ಮುಂಜಾನೆ ಪ್ರತಿನಿತ್ಯದಂತೆ ಹಾಲು ಡೈರಿಗೆ ಹಾಲು ಕೊಡಲು ತೆರಳುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ಮಹಿಳೆ ಹುಣ್ಸೆಕಟ್ಟೆಯ ಮನೆಯಿಂದ ಹಾಲು ತೆಗೆದುಕೊಂಡು ಹೋಗುತ್ತಿದ್ದಾಗ ಸಮೀಪದ ಹಾಡಿಯಿಂದ ಹಾರಿದ ಚಿರತೆ ಮಹಿಳೆ ಮೇಲೆ ದಾಳಿ ನಡೆಸಿದೆ.

ಚಿರತೆಯ ದಾಳಿಯಿಂದಾಗಿ ಮಹಿಳೆಯ ಮುಖ, ಹಣೆ, ಕುತ್ತಿಗೆ ಹಾಗೂ ಕಿವಿ, ಕೈ ಭಾಗಕ್ಕೆ ಗಾಯಗಳಾಗಿದೆ. ಕೂಡಲೇ ಸ್ಥಳೀಯರು ಗಾಯಗೊಂಡ ಮಹಿಳೆಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈಗಾಗಲೇ ಉಡುಪಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಚಿರತೆ ಜನ ನಿಬಿಡ ಪ್ರದೇಶಕ್ಕೆ ಆಗಮಿಸುತ್ತಿರುವ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ ಈ ಭಾಗದಲ್ಲಿ ಚಿರತೆ ಓಡಾಡ ಇದೇ ಮೊದಲು ಎನ್ನಲಾಗಿದ್ದು. ಅಚಾನಕ್ ಆಗಿ ಚಿರತೆ ಕಾಣಿಸಿಕೊಂಡಿರುವುದು ಅಲ್ಲದೆ, ಧಾಳಿ ಮಾಡಿ ಗಂಭೀರ ಗಾಯಗೊಳಿಸಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಸದ್ಯ ಚಿರತೆ ಧಾಳಿ ಮಾಡಿದ ಪ್ರದೇಶಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.