LATEST NEWS
ತೆಂಗಿನ ಗರಿಯಲ್ಲಿ ವಿರಾಟ್ ಕೊಹ್ಲಿ – ಎಕ್ಸ್‌ಕ್ಯೂಸಿವ್ ವರ್ಲ್ಡ್ ರೆಕಾರ್ಡ್ ಪಟ್ಟಿಗೆ ಕೋಟ ನಾಗೇಶ್ ಆಚಾರ್ಯ ನಾಮಾಂಕಿತ
ಬ್ರಹ್ಮಾವರ ಡಿಸೆಂಬರ್ 27: ತೆಂಗಿನ ಗರಿಯಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿಯ ಕಲಾಕೃತಿ ಬಿಡಿಸಿ ಇದೀಗ ಕಲಾವಿದ ಕೋಟ ನಾಗೇಶ್ ಆಚಾರ್ಯ ಅವರು ಎಕ್ಸ್‌ಕ್ಯೂಸಿವ್ ವರ್ಲ್ಡ್ ರೆಕಾರ್ಡ್‌ಗೆ ಆಯ್ಕೆಯಾದ ಹಿರಿಮೆಗೆ ಪಾತ್ರವಾಗಿದೆ.
ಬ್ರಹ್ಮಾವರ ತಾಲೂಕಿನ ಚಿತ್ರಪಾಡಿ ಗ್ರಾಮದ ಕಾರ್ತಟ್ಟು ನಿವಾಸಿ ಸುಬ್ರಾಯ ಆಚಾರ್ ಹಾಗೂ ಸುಶೀಲ ದಂಪತಿ ಪುತ್ರ ನಾಗೇಶ್ ಆಚಾರ್ಯ ಮರದ ಕೆತ್ತನೆಯ ಶಿಲ್ಪಕಲಾ ವೃತ್ತಿ ನಿರ್ವಹಿಸುತ್ತಿದ್ದಾರೆ. ತನ್ನ ವೃತ್ತಿ ಬದುಕಿನ ಬಿಡುವಿನ ವೇಳೆಯಲ್ಲಿ ಎಳೆಯ ವಯಸ್ಸಿನಲ್ಲಿ ಆಸಕ್ತಿ ಹೊಂದಿದ್ದ ಚಿತ್ರಕಲೆಯನ್ನೇ ನೆಚ್ಚಿನ ಹವ್ಯಾಸವಾಗಿ ಮುಂದುವರಿಸಿಕೊಂಡು ಬಂದಿದ್ದರು.
ಮೊದಮೊದಲು ಪೆನ್ಸಿಲ್ ಆರ್ಟ್ ರಚಿಸುತ್ತಿದ್ದ ಇವರು ಬಳಿಕ ಪೇಪರ್ ಕಟ್ಟಿಂಗ್ ಆರ್ಟ್, ಲೀಫ್ ಆರ್ಟ್ ಗಳಲ್ಲಿ ಕಲಾಕೃತಿಗಳನ್ನು ರಚಿಸಿದ್ದಾರೆ. ಇತ್ತೀಚಿಗಷ್ಟೆ ತೆಂಗಿನ ಗರಿಯಲ್ಲಿ ಕೇವಲ 9 ನಿಮಿಷಗಳ ಅವಧಿಯಲ್ಲಿ ರಚಿಸಿದ ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿಯ ಕಲಾಕೃತಿಯನ್ನು I.S.O ದಿಂದ ಪ್ರಮಾಣೀಕೃತ ಗೊಂಡಿರುವ LB exclusive talent & creation co. ಎಂಬ ಉತ್ತರ ಪ್ರದೇಶದ ಬರೇಲಿಯಾದ ಸಂಸ್ಥೆಯಿಂದ ಆಯ್ಕೆಗೊಳ್ಳುವ ಪ್ರತಿಷ್ಠಿತ Exclusive World Records ಗೆ ಕಳುಹಿಸಲಾಗಿದ್ದು , ಇವರ ಕಲಾಪ್ರತಿಭೆಯ ನೈಪುಣ್ಯತೆಯನ್ನು ಪರಾಮರ್ಶಿಸಿ ಅರ್ಹವಾಗಿ ಇವರಿಂದ ರಚಿತಗೊಂಡ ಕಲಾಕೃತಿಯು exclusive world records ಪಟ್ಟಿಗೆ ನಾಮಾಂಕಿತಗೊಂಡಿದೆ.