KARNATAKA
ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ: ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀ ಅರೆಸ್ಟ್!

ಬೆಂಗಳೂರು, ಮಾರ್ಚ್ 11: ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ಕನಕಲಕ್ಷ್ಮೀ ಬಂಧನವಾಗಿದೆ. ಎಸ್ ಐಟಿ ಅಧಿಕಾರಿಗಳು ಇಂದು (ಮಾರ್ಚ್ 11) ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮಿ ಅವರನ್ನು ಬಂಧಿಸಿದ್ದಾರೆ.
ಕರ್ನಾಟಕ ಭೋವಿ ನಿಗಮ ಹಗರಣದ ತನಿಖೆ ಎದುರಿಸಿದಾಗ ಪೊಲೀಸ್ ಅಧಿಕಾರಿ ವಿವಸ್ತ್ರಗೊಳಿಸಿ ವಿಚಾರಣೆ ನಡೆಸಿದ್ದಲ್ಲದೆ, 25 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಮಹಿಳಾ ವಕೀಲೆ ಜೀವಾ 13 ಪುಟಗಳ ಡೆತ್ನೋಟ್ ಬರೆದಿಟ್ಟು 2024 ನವೆಂಬರ್ 22ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಸಿಐಡಿ ಡಿವೈಎಸ್ ಪಿ ಕನಕಲಕ್ಷ್ಮಿ ವಿರುದ್ಧ ಜೀವಾ ಸಹೋದರಿ ದೂರು ನೀಡಿದ್ದರು. ಇದೀಗ ಈ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಕನಕಲಕ್ಷ್ಮಿ ಅವರನ್ನು ಬಂಧಿಸಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೋವಿ ನಿಗಮದ ಅಕ್ರಮದ ಕುರಿತು ಕಾಂಗ್ರೆಸ್ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಇದನ್ನು ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀ ಅವರು ತನಿಖೆ ಕೈಗೊಂಡಿದ್ದು, ಬೋವಿ ನಿಗಮದ ಫಲಾನುಭವಿಗಳಿಗೆ ಮೆಟಿರಿಯಲ್ ಪೂರೈಸಿದ ಆರೋಪದ ಮೇಲೆ 34 ವರ್ಷದ ವಕೀಲೆ ಜೀವಾ ಎನ್ನುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದ್ರೆ, ವಿಚಾರಣೆ ಬಳಿಕ ವಕೀಲೆ ಜೀವಾ ಬೆಂಗಳೂರಿನ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
1 Comment