LATEST NEWS
ಕುಲಶೇಖರ ಬಳಿ ರೈಲ್ವೆ ಹಳಿ ಮೇಲೆ ಭೂಕುಸಿತ
ಮಂಗಳೂರು ಜುಲೈ 16: ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮತ್ತೆ ಕುಲಶೇಖರ- ಪಡೀಲ್ ರೈಲ್ವೆ ಸುರಂಗ ಮಾರ್ಗದ ಬಳಿ ಭೂ ಕುಸಿತ ಉಂಟಾಗಿದ್ದು, ಹಳಿಗಲ ಮೇಲೆ ಮಣ್ಣು ಬಿದ್ದಿದೆ.
ಇದೇ ಜಾಗದಲ್ಲಿ ಕಳೆದ ಎರಡು ವರ್ಷಗಳಿಂದ ಭೂಕುಸಿತ ಉಂಟಾಗುತ್ತಿದ್ದು, ಕಳೆದ ಬಾರಿಯೂ ತಡೆಗೋಡೆ ಕುಸಿದು ರೈಲು ಸಂಚಾರದಲ್ಲಿ ಅಸ್ತವ್ಯಸ್ತವಾಗಿತ್ತು, ಈಗಾಗಲೇ ರೈಲ್ವೆ ಇಲಾಖೆ ತಡೆಗೋಡೆ ನಿರ್ಮಿಸಿದ್ದರೂ ಭಾರೀ ಪ್ರಮಾಣದ ಗುಡ್ಡ ಕುಸಿದಿರುವುದರಿಂದ ತಡೆಗೋಡೆ ಜಾರಿ ಮಣ್ಣು ರೈಲು ಹಳಿಗಳ ಮೇಲೆ ಬಿದ್ದಿದೆ.
ಮಂಗಳೂರು ಮೂಲಕ ಕೊಂಕಣ ರೈಲು ಸಂಪರ್ಕಿಸುವ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಮುಂಬೈಯಿಂದ ಮಂಗಳೂರಿಗೆ ಬರುವ ರೈಲುಗಳು ತೋಕೂರು ನಿಲ್ದಾಣದವರೆಗೆ ಮಾತ್ರ ಸಂಚರಿಸಿದ್ದು, ಅಲ್ಲಿಂದಲೇ ಮರಳಿ ಮುಂಬೈಗೆ ಪ್ರಯಾಣಿಸಿವೆ. ಮುಂಬೈಗೆ ತೆರಳುವ ಮತ್ಸ್ಯಗಂಧಾ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು ರೈಲ್ವೆ ನಿಲ್ದಾಣದಲ್ಲಿಯೇ ನಿಲುಗಡೆ ಮಾಡಲಾಗಿದೆ. ಪಾಲಕ್ಕಾಡ್ ವಿಭಾಗಕ್ಕೆ ಸೇರಿದ ಕುಲಶೇಖರ ಸುರಂಗ ಮಾರ್ಗ ಸಮೀಪ ತಡೆಗೋಡೆ ಕುಸಿದಿದೆ. ಎರಡು ವರ್ಷದ ಹಿಂದೆಯೂ ಇದೇ ಜಾಗದಲ್ಲಿ ಮಣ್ಣು ಕುಸಿದು ಎರಡು ದಿನ ರೈಲು ಸಂಚಾರ ಸ್ಥಗಿತವಾಗಿತ್ತು. ಬಳಿಕ ಮಣ್ಣು ಕುಸಿಯುವ ಜಾಗದಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು.
ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಡೆಗೋಡೆಯಲ್ಲಿ ಬಿರುಕು ಬಿಟ್ಟು, ಹಳಿ ಮೇಲೆ ಬಿದ್ದಿದೆ. ಸ್ಥಳಕ್ಕೆ ಪಾಲಕ್ಕಾಡ್ ವಿಭಾಗದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಳಿಯಲ್ಲಿ ಬಿದ್ದಿರುವ ಕಲ್ಲು– ಮಣ್ಣು ತೆರವು ಮಾಡುವ ಕಾರ್ಯ ನಡೆಯುತ್ತಿದೆ. ಆದಷ್ಟು ಶೀಘ್ರದಲ್ಲಿಯೇ ರೈಲುಗಳ ಓಡಾಟ ಆರಂಭಿಸಲಾಗುವುದು ಎಂದು ಎಂದು ತಿಳಿಸಿದ್ದಾರೆ.
ಮಂಗಳೂರು ಸೆಂಟ್ರಲ್–ಲೋಕಮಾನ್ಯ ತಿಲಕ ( 02620) ಮತ್ಸ್ಯಗಂಧಾ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ. ಮುಂಬೈ ಸಿಎಸ್‌ಎಂಟಿ–ಮಂಗಳೂರು ಜಂಕ್ಷನ್ (01133) ಎಕ್ಸ್‌ಪ್ರೆಸ್ ವಿಶೇಷ ರೈಲು ಸುರತ್ಕಲ್ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ. ಮಂಗಳೂರು ಜಂಕ್ಷನ್–ಮುಂಬೈ ಸಿಎಂಎಸ್‌ಟಿ (01134) ರೈಲು, ಶುಕ್ರವಾರ ಸಂಜೆ 5.18ಕ್ಕೆ ಮಂಗಳೂರು ಜಂಕ್ಷನ್ ಬದಲು ಸುರತ್ಕಲ್ ನಿಲ್ದಾಣದಿಂದ ಹೊರಟಿದೆ.