KARNATAKA
ಮಹಾಮಳೆಗೆ ಕರಗುತ್ತಿರುವ ಕೊಡಗಿನ ಬೆಟ್ಟಗಳು ಲೆಕ್ಕಕ್ಕೆ ಸಿಗದ ನಾಪತ್ತೆಯಾದವರ ಸಂಖ್ಯೆ
ಮಹಾಮಳೆಗೆ ಕರಗುತ್ತಿರುವ ಕೊಡಗಿನ ಬೆಟ್ಟಗಳು ಲೆಕ್ಕಕ್ಕೆ ಸಿಗದ ನಾಪತ್ತೆಯಾದವರ ಸಂಖ್ಯೆ
ಕೊಡಗು ಅಗಸ್ಟ್ 17: ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕರೆ ಮಳೆ ಮುಂದುವರೆದಿದ್ದು, ಪ್ರವಾಹ ಪರಿಸ್ಥಿತಿ ಇನ್ನೂ ತಗ್ಗಿಲ್ಲ. ಮಹಾಮಳೆಗೆ ಎಲ್ಲೆಂದರಲ್ಲಿ ಬೆಟ್ಟಗಳು ಕುಸಿದು ಬೀಳುತ್ತಿದ್ದು, ಪರಿಣಾಮ ಸಾವಿರಾರು ಜನರು ತಮ್ಮ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ.
ಬೆಟ್ಟಗಳು ಕುಸಿದು ಬೀಳುತ್ತಿರುವ ಪರಿಣಾಮ ಮಕನೂರು ಪ್ರದೇಶದಲ್ಲಿರುವ ಕೊಡಗು-ಮಂಗಳೂರಿನ ಹೆದ್ದಾರಿಗಳು ಸಂಪೂರ್ಣವಾಗಿ ಬಂದ್ ಆಗಿದೆ.
ಈ ನಡುವೆ ಬೆಟ್ಟಗುಡ್ಡ ಕುಸಿತದಿಂದ ಎಷ್ಟು ಮಂದಿ ಅಪಾಯಕ್ಕೆ ಸಿಲುಕಿದ್ದಾರೆ ಎಂಬ ಮಾಹಿತಿಯೇ ಸಿಗುತ್ತಿಲ್ಲ. ಕುಸಿದ ಸ್ಥಳದಲ್ಲಿ ಬರೀ ಮನೆಗಳು ಕಾಣಿಸುತ್ತಿದ್ದು. ಬೆಟ್ಟ ಕುಸಿಯುತ್ತಲೇ ಇರುವುದರಿಂದ ಕಾರ್ಯಾಚರಣೆಯೂ ಸಾಧ್ಯವಾಗುತ್ತಿಲ್ಲ. ಪ್ರವಾಹ ಸ್ಥಿತಿಯಲ್ಲಿ ಇದ್ದವರನ್ನು ಮಾತ್ರ ರಕ್ಷಣೆ ಮಾಡಲಾಗುತ್ತಿದೆ. ಬೆಟ್ಟಗುಡ್ಡಗಳಲ್ಲಿ ಜೀವನ್ಮರಣ ಹೋರಾಟ ಮುಂದುವರಿದಿದೆ.
ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕೆಲವರನ್ನು ರಕ್ಷಣೆ ಮಾಡಿದ್ದಾರೆ. ಮಕ್ಕಂದೂರು ಬೆಟ್ಟದಲ್ಲಿ ಮತ್ತಷ್ಟು ಮಂದಿ ಇರುವ ಶಂಕೆಯಿದ್ದು ಭಾರಿ ಮಳೆಯಿಂದ ಹೆಲಿಕಾಪ್ಟರ್‌ನಿಂದ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ಸೇನಾ ಪಡೆಯ ಮೂರು ರಕ್ಷಣಾ ತಂಡಗಳು ಕಾರ್ಯಾಚರಣೆಗೆ ಬರಲಿವೆ.
ಆಶ್ರಯ ಕಳೆದುಕೊಂಡವರ ಸಂಖ್ಯೆ ಇನ್ನೂ ನಿಖರವಾಗಿ ತಿಳಿಯುತ್ತಿಲ್ಲ. ಮಡಿಕೇರಿ- ವಿರಾಜಪೇಟೆ ರಸ್ತೆಯ ಬೇತ್ರಿ ಬಳಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು,ಸಂಚಾರ ಮತ್ತೆ ಬಂದ್ ಆಗಿದೆ. ಮೈಸೂರು- ಬಂಟ್ವಾಳ ರಸ್ತೆಯಲ್ಲಿ ಮತ್ತೆ ಗುಡ್ಡ ಕುಸಿದು ತೆರವು ಕಾರ್ಯಾಚರಣೆ ಆರಂಭವಾಗಿದೆ.