BANTWAL
ಬಂಟ್ವಾಳ- ರಬ್ಬರ್ ಟ್ಯಾಪಿಂಗ್ ಕಾರ್ಮಿಕರ ಶೆಡ್ ಮೇಲೆ ಗುಡ್ಡ ಕುಸಿತ – ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ
ಬಂಟ್ವಾಳ ಜುಲೈ 07 : ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನಿನ್ನೆ ಗುಡ್ಡ ಜರಿದು ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಕಾರ್ಮಿಕರ ಶೆಡ್ ಮೇಲೆ ಬಿದ್ದ ಪ್ರಕರಣದಲ್ಲಿ ಇಂದು ಮತ್ತೆ ಇಬ್ಬರು ಕೇರಳ ಮೂಲದ ಕಾರ್ಮಿಕರು ಸಾವನಪ್ಪಿದ್ದಾರೆ. ಸಾವಿನ ಸಂಖ್ಯೆ ಮೂರಕ್ಕೆ ಏರಿದೆ.
ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಕೊಟ್ಟಾಂ ನಿವಾಸಿ ಬಾಬು (46) ಮತ್ತು ಸಂತೋಷ್ ಅಲ್ಫೊನ್ಸಾ(46) ಮೃತಪಟ್ಟ ದುರ್ದೈವಿಗಳು. ಹೆನ್ರಿ ಕಾರ್ಲೊ ಎಂಬವರ ರಬ್ಬರ್ ತೋಟದಲ್ಲಿ ಕೆಲಸಕ್ಕೆ ಅಖಿಲ್ ಎಂಬ ಗುತ್ತಿಗೆದಾರರು ನಾಲ್ವರನ್ನು ಕರೆತಂದಿದ್ದರು. ಅವರೆಲ್ಲರೂ ಮನೆಯ ಸಮೀಪದ ಶೆಡ್‌ನಲ್ಲಿ ವಾಸವಾಗಿದ್ದರು. ಇಲ್ಲಿ, ಎರಡು ದಿನಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು ಅದನ್ನು ಜೆಸಿಬಿ ಮೂಲಕ ತೆರವುಗೊಳಿಸಿದ್ದರು ಎನ್ನಲಾಗಿದೆ.
ಆದರೆ ನಿನ್ನೆ ಮಳೆಗೆ ಸಮೀಪದ ಗುಡ್ಡ ಕುಸಿದು ಕಾರ್ಮಿಕರು ವಾಸಿಸುತ್ತಿದ್ದ ಶೆಡ್ ಮೇಲೆ ಬಿದ್ದಿದೆ. ಈ ಘಟನೆಯಲ್ಲಿ ನಾಲ್ವರಲ್ಲಿ ಮೂವರನ್ನು ರಕ್ಷಣೆ ಮಾಡಿ ನಿನ್ನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಾದವರಲ್ಲಿ ಇಬ್ಬರು ಸಾವನಪ್ಪಿದ್ದಾರೆ. ಕೇರಳದ ಪಾಲಕ್ಕಾಡ್ ನಿವಾಸಿ ಬಿಜು(45) ನಿನ್ನೆಯೇ ಮೃತಪಟ್ಟಿದ್ದರು. ಇನ್ನು ಕಣ್ಣೂರು ನಿವಾಸಿ ಜಾನ್ (44)ಗೆ ಚಿಕಿತ್ಸೆ ನೀಡಲಾಗುತ್ತಿದೆ.