BANTWAL
ಬಂಟ್ವಾಳ ಪುರಸಭೆ ಮಾಡಬೇಕಾಗಿದ್ದ ಕಾರ್ಯ ಸ್ವತಃ ಮಾಡಿ ಪ್ರಶಂಸೆಗೆ ಪಾತ್ರವಾದ ಮಹಿಳಾ ಅಧಿಕಾರಿ..!
ಬಂಟ್ವಾಳ: ಸಮಾಜದಲ್ಲಿ ಸತ್ತ ಮೇಲೆ ಅಳುವವರು ಜಾಸ್ತಿ, ಆ ಹೊಂಡ ಮುಚ್ಚಿದ್ದರೆ ಆತ ಅಥವಾ ಆಕೆಗೆ ಈ ರೀತಿ ಆಗುತಿರಲಿಲ್ಲ ಎಂದು ಪಶ್ಚಾತಾಪ ಪಡುವವರು ಹೆಚ್ಚಾಗಿರುವ ಈ ಕಾಲ ಘಟ್ಟದಲ್ಲಿ ಇಲ್ಲೊಬ್ಬ ಮಹಿಳಾ ಅಧಿಕಾರಿ ಸಮಾಜ ಮುಖಿ ಕಾರ್ಯ ಮಾಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.
ಇವರೇ ಬಿಂದಿಯಾ ನಾಯಕ್, ತನಗೆ ಸಂಬಂಧಪಡದ ಆದರೆ ಸಾರ್ವಜನಿಕರಿಗೆ ತೊಂದರೆ, ಅನಾಹುತಗಳಿಗೆ ದಾರಿಯಾಗಿದ್ದ ಬಹು ಮುಖ್ಯ ಸಮಸ್ಯೆಗೆ ಅವರು ಸ್ಪಂದಿಸುವ ಕಾರ್ಯ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಿಸಿರೋಡಿನ ವಿವೇಕನಗರ ರಸ್ತೆಯ ಗುಂಡಿಯನ್ನು ಕಾಂಕ್ರೀಟ್ ಮಾಡಿಸಿದ್ದಾರೆ. ಈ ಘಟನೆ ಡಿ. 4 ರಂದು ಸೋಮವಾರ ರಾತ್ರಿ ನಡೆದಿದೆ. ಬಿಸಿರೋಡಿನ ಬಸ್ ನಿಲ್ದಾಣದ ಮುಂಭಾಗದ ಸರ್ವೀಸ್ ರಸ್ತೆಯಿಂದ ವಿವೇಕ ನಗರ ರಸ್ತೆಗೆ ಪ್ರವೇಶ ಮಾಡುವ ಭಾಗದಲ್ಲಿ ರಸ್ತೆಯನ್ನು ಉದ್ದಕ್ಕೆ ಅಗೆದು ಹಾಕಲಾಗಿದ್ದು, ಬಳಿಕ ಅದನ್ನು ಮುಚ್ಚದ ಕಾರಣದಿಂದಾಗಿ ವಾಹನಸವಾರರು ಸಂಕಷ್ಟಕ್ಕೆ ಸಿಲುಕಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿನ ಹೋಟೆಲ್ ಒಂದರ ಮಾಲಕ ನೀರಿನ ಪೈಪ್ ಅಳವಡಿಕೆಯ ಸಂದರ್ಭದಲ್ಲಿ ಕಾಂಕ್ರೀಟ್ ರಸ್ತೆಯನ್ನು ಅಗೆದುಹಾಕಿ ಹೋಗಿದ್ದರು. ಇದು ಪುರಸಭಾ ಸಹಿತ ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಗಳ ಕಣ್ಣಿಗೆ ಬಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ,ಕನಿಷ್ಠ ಪಕ್ಷ ಅಗೆದು ಹಾಕಿದ ವ್ಯಕ್ತಿಯನ್ನು ಕರೆದು ಕಾಂಕ್ರೀಟ್ ಹಾಕಿಸುವ ಕೆಲಸ ಕೂಡ ಮಾಡಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಆದರೆ ಇಲಾಖೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮೌನವಾಗಿಯೇ ಕುಳಿತುಕೊಂಡಿತ್ತು. ಈ ರಸ್ತೆಯಲ್ಲಿ ಹತ್ತಾರು ಮನೆಗಳಿದ್ದರೆ,ಮಕ್ಕಳ ಆಸ್ಪತ್ರೆ ಹಾಗೂ ಶಾಲೆಯೊಂದಿದೆ. ಇಲ್ಲಿಗೆ ಬಂದು ಹೋಗುವ ವಾಹನ ಸವಾರರು ಜೀವ ಭಯದಿಂದ ವಾಹನಗಳನ್ನು ರಸ್ತೆಗೆ ಇಳಿಸುತ್ತಿದ್ದರು. ಇದನ್ನು ಕಂಡ ಇಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಬಿಂದಿಯಾ ನಾಯಕ್ ಅವರು ಪುರಸಭೆಗೆ ಆರಂಭದಲ್ಲಿ ಮೌಖಿಕವಾಗಿ ತಿಳಿಸಿದ್ದರೆ, ಬಳಿಕ ಲಿಖಿತವಾಗಿ ರಸ್ತೆಯನ್ನು ಸರಿಪಡಿಸುವಂತೆ ಮನವಿ ಮಾಡಿದ್ದರು.
ಆದರೆ ಯಾವುದಕ್ಕೂ ಬೆಲೆ ಕೊಡದೆ ಮೌನವಾಗಿದ್ದ ಇಲಾಖೆಯ ಸಹವಾಸ ಬೇಡ ಎಂದು ಸ್ವತಃ ಕಾಂಕ್ರೀಟ್ ಹಾಕಿಸಿದ್ದಾರೆ. ರಾತ್ರಿ ವೇಳೆ ವಾಹನಗಳ ಓಡಾಟ ಕಡಿಮೆ ಇರುವ ಕಾರಣ ಸೋಮವಾರ ರಾತ್ರಿ ವೇಳೆ ಕಾಂಕ್ರೀಟ್ ಹಾಕಲಾಗಿದೆ. ಬಿಂದಿಯಾ ಅವರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.