DAKSHINA KANNADA
ಕುಂತೂರು ಶಾಲಾ ಕಟ್ಟಡ ಕುಸಿದು ನಾಲ್ವರು ವಿದ್ಯಾರ್ಥಿಗಳಿಗೆ ಗಾಯ :: ಜಿ.ಪಂ ಫೀಲ್ಡ್ ಇಂಜಿನಿಯರ್, ಮುಖ್ಯಶಿಕ್ಷಕ ಸಸ್ಪೆಂಡ್
ಪುತ್ತೂರು ಅಗಸ್ಟ್ 28: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಸರ್ಕಾರಿ ಶಾಲೆಯ ಮೇಲ್ಚಾವಣಿ ಕುಸಿದು ನಾಲ್ವರು ಮಕ್ಕಳಿಗೆ ಗಾಯವಾದ ಘಟನೆ ನಡೆದಿದೆ. ಅದೃಷ್ಟವಶಾತ್ 180 ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಫೀಲ್ಡ್ ಇಂಜಿನಿಯರ್ನನ್ನು ಅಮಾನತುಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
ಸುಮಾರು 50 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಈ ಕಟ್ಟಡ ಗೋಡೆ ಬಿರುಕು ಬಿಟ್ಟು ಶಿಥಿಲಾವಸ್ಥೆ ತಲುಪಿತ್ತು. ಈ ಬಗ್ಗೆ ಶಾಲಾಭಿವೃದ್ಧಿ, ಸ್ಥಳಿಯಾಡಳಿತದಿಂದ ದುರಸ್ತಿ ಅಥವಾ ಕೆಡವಲು ಅನುಮತಿಗಾಗಿ ಸಂಬಂಧಿಸಿದ ಇಲಾಖೆಗೆ ಮನವಿ ನೀಡಲಾಗಿತ್ತು. ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಉಪ ವಿಭಾಗದ ಎಂಜಿನಿಯರ್‌ಸಂಗಪ್ಪ ಹುಕ್ಕೇರಿ ಕಟ್ಟಡ ಗುಣಮಟ್ಟ ಪರಿಶೀಲಿಸಿ ಯಾವುದೆ ಅಪಾಯವಿಲ್ಲ ಎಂದು ದಾಖಲಿಸಿದ್ದರು. ದುರಸ್ತಿಗಾಗಿ ಮಳೆಹಾನಿ ಯೋಜನೆಯಡಿಯಲ್ಲಿ 1.50 ಲಕ್ಷ ರು. ಮಂಜೂರಾಗಿತ್ತು. ಈ ಮೊತ್ತದಲ್ಲಿ ಗೊಡೆ ಬಿರುಕು ಬಿಟ್ಟ ಕಟ್ಟಡದ ಅಡಿಪಾಯ ಗಟ್ಟಿಗೊಳಿಸುವ ಕಾಮಗಾರಿ ನಡೆಸುವ ಸಲುವಾಗಿ ಮಂಗಳವಾರ ಹಿಟಾಚಿ ಮೂಲಕ ಗೋಡೆ ಅಡಿಪಾಯಕ್ಕೆ ತಾಗಿಕೊಂಡಂತೆ ಕಲ್ಲು ಕಟ್ಟಿ ಅಡಿಪಾಯ ಗಟ್ಟಿಗೊಳಿಸುವ ಸಲುವಾಗಿ ಹೊಂಡ ತೆಗೆಯಲಾಗುತ್ತಿತ್ತು. ಈ ವೇಳೆ ಶಾಲಾ ಕಟ್ಟಡದ ಒಂದು ಭಾಗ ಕುಸಿದು ಬಿದ್ದು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಏಳನೇ ತರಗತಿಯ ರಶ್ಮಿ, ದೀಕ್ಷಾ, ಫಾತಿಮಾ ಸುಹಾನಾ ಮತ್ತು ಯಶಿತಾ ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್, ಹೆಚ್ಚಿನ ವಿದ್ಯಾರ್ಥಿಗಳು ಆ ಸಮಯದಲ್ಲಿ ಶಾಲಾ ಮೈದಾನದಲ್ಲಿ ಇದ್ದುದರಿಂದ ಭಾರೀ ಅನಾಹುತ ತಪ್ಪಿದೆ.
ಕುಸಿದ ಕಟ್ಟಡವು ಸರಿಸುಮಾರು 50 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಸರಿಯಾದ ಅಡಿಪಾಯವನ್ನು ಹೊಂದಿಲ್ಲ, ಇದು ಕುಸಿತಕ್ಕೆ ಕಾರಣವಾಗಿರಬಹುದು.ಕಟ್ಟಡದ ದುಸ್ಥಿತಿಯ ಅರಿವಿದ್ದರೂ ತರಾತುರಿಯಲ್ಲಿ ಕಾಮಗಾರಿ ಆರಂಭಿಸಿರುವುದು ಸ್ಥಳೀಯರು ಹಾಗೂ ಪೋಷಕರ ಆಕ್ರೋಶಕ್ಕೆ ಕಾರಣವಾಗಿತ್ತು.