LATEST NEWS
ಕುಂದಾಪುರ – ಸಂಸಾರದಲ್ಲಿ ವಿರಸ – ಮನೆಯವರ ಎದುರೇ ನದಿಗೆ ಹಾರಿದ ಪೋಟೋಗ್ರಾಫರ್
ಕುಂದಾಪುರ ಜುಲೈ 17: ಗಂಡ ಹೆಂಡತಿ ನಡುವೆ ನಡೆದ ಗಲಾಟೆ ಪೊಲೀಸ್ ಮೆಟ್ಟಿಲೇರಿದ ಪರಿಣಾಮ ಮನನೊಂದು ಪತಿ ಮನೆಯವರ ಎದುರೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಂಡ್ಲೂರು ಎಂಬಲ್ಲಿ ಮಂಗಳವಾರ ಮಧ್ಯಾಹ್ನದ ಸುಮಾರಿಗೆ ನಡೆದಿದೆ.
ನದಿಗೆ ಹಾರಿ ನಾಪತ್ತೆಯಾಗಿರುವವರನ್ನು ಕಾಳಾವರ ಜನತಾ ಕಾಲನಿ ನಿವಾಸಿ ಹರೀಶ್ (44) ಎಂದು ಗುರುತಿಸಲಾಗಿದ್ದು, ಇವರು ವೃತ್ತಿಯಲ್ಲಿ ಪೋಟೋಗ್ರಾಫರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಹರಿಶ್ ಸುಮಾರು 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಯಾಗಿದ್ದು, ಇತ್ತಿಚಿನ ದಿನಗಳಲ್ಲಿ ಗಂಡ ಹೆಂಡತಿ ನಡುವೆ ಗಲಾಟೆಯಾಗುತ್ತಿತ್ತು ಎಂದು ಹೇಳಲಾಗಿದೆ. ಈ ಹಿನ್ನಲೆ ಜುಲೈ 16ರಂದು ಹರೀಶ್ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದರು. ಪೊಲೀಸರು ಹರೀಶ್ ನನ್ನು ಕರೆದುಕೊಂಡು ಬರುವಂತೆ ಹೇಳಿದ್ದರು. ಅದರಂತೆ ಹರೀಶ್ ಠಾಣೆಗೆ ಬಂದಿದ್ದು ದಂಪತಿಗೆ ಪೊಲೀಸರು ಬುದ್ದಿ ಮಾತನ್ನು ಹೇಳಿ ಮುಂದಕ್ಕೆ ಒಳ್ಳೆಯ ರೀತಿಯಲ್ಲಿ ಜೀವನ ನಡೆಸುವಂತೆ ತಿಳುವಳಿಕೆ ಹೇಳಿ ಕಳುಹಿಸಿಕೊಟ್ಟಿದ್ದರು.
ಹರೀಶ್ ತಾವು ಬಾಡಿಗೆ ಮಾಡಿಕೊಂಡು ಬಂದ ಆಟೋ ರಿಕ್ಷಾವು ಕಂಡ್ಲೂರು ಸೇತುವೆಯ ಮೇಲೆ ಸಂಚರಿಸುತ್ತಿರುವಾಗ ಹರೀಶ್ ರಿಕ್ಷಾ ಚಾಲಕನಲ್ಲಿ ನಿಲ್ಲಿಸುವಂತೆ ಹೇಳಿದ್ದಾರೆ. ಈ ವೇಳೆ ಆಟೋ ವೇಗ ಕಡಿಮೆ ಮಾಡಿದಾಗ ಹರೀಶ್ ಒಮ್ಮೇಲೆ ರಿಕ್ಷಾದಿಂದ ಕೆಳಕ್ಕೆ ಇಳಿದು ಸೇತುವೆಯ ತಡೆಬೇಲಿಯನ್ನು ಹಾರಿ ಕಂಡ್ಲೂರು ವಾರಾಹಿ ನದಿಗೆ ದುಮುಕಿದ್ದು ಹೊಳೆಯ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದ ಮಗ ಹರೀಶ್‌ನನ್ನು ಪತ್ತೆ ಹಚ್ಚಿಕೊಡಬೇಕೆಂದು ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಹರೀಶ್ ಅವರ ಹುಡುಕಾಟಕ್ಕೆ ಪೊಲೀಸರು, ಅಗ್ನಿಶಾಮಕ, ಸ್ಥಳೀಯರು, ಮೀನುಗಾರರು ವ್ಯಾಪಕ ಶೋಧ ನಡೆಸಿದ್ದು ಮಳೆ ಹಿನ್ನೆಲೆ ನೀರಿನ ಹರಿವು ಹೆಚ್ಚಿರುವ ಕಾರಣ ಸಾಧ್ಯವಾಗಿಲ್ಲ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.