LATEST NEWS
ಕುಕ್ಕುಂದೂರು ರವೀಂದ್ರ ಕುಮಾರ್ ಅವರ ಮುದ್ದಿನ ಕೋಣ ‘ಅಪ್ಪು’ ಇನ್ನಿಲ್ಲ
ಮಂಗಳೂರು: ಕರಾವಳಿ ಕಂಬಳ ಕೂಟಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಕುಕ್ಕುಂದೂರು ರವೀಂದ್ರ ಕುಮಾರ್ ಅವರ ಮುದ್ದಿನ ಕೋಣ ‘ಅಪ್ಪು’ ಮಂಗಳವಾರ ಸಾವನ್ನಪ್ಪಿದೆ. ಕಂಬಳ ಕೋಣ ಅಪ್ಪುವಿಗೆ ಸುಮಾರು 22 ವರ್ಷ ವಯಸ್ಸಾಗಿತ್ತು. ಒಂದು ವಾರದಿಂದ ಬೇಧಿಯಿಂದ ಬಳಲುತ್ತಿದ್ದ ಕೋಣ ಅಪ್ಪುವಿಗೆ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಮೃತಪಟ್ಟಿದೆ.
2006ರಲ್ಲಿ ರೆಂಜಾಳ ಬನಂದಬೆಟ್ಟುವಿನಿಂದ ಜ್ಯೂನಿಯರ್ ವಿಭಾಗದಲ್ಲಿ ಮೊದಲ ಬಾರಿಗೆ ಕಂಬಳ ಗದ್ದೆಗೆ ಇಳಿದಿದ್ದ ಅಪ್ಪು, ನೇಗಿಲು ಕಿರಿಯ ವಿಭಾಗದಲ್ಲೇ 25 ಪದಕ ಪಡೆದಿದ್ದ, ಜತೆಗೆ ಹಗ್ಗ ಹಿರಿಯ, ಕಿರಿಯ, ನೇಗಿಲು ಕಿರಿಯ ವಿಭಾಗ ಸೇರಿದಂತೆ ಕಂಬಳ ಕೂಟದ ಎಲ್ಲ ವಿಭಾಗದಲ್ಲಿ ಪದಕ ಪಡೆದ ಹೆಗ್ಗಳಿಕೆ ಅಪ್ಪುವಿನದ್ದು. ಕಂಬಳ ಕೂಟದಲ್ಲಿ ತಾನು ಭಾಗವಹಿಸಿದ್ದ 6-7 ವರ್ಷದ ಅವಧಿಯಯಲ್ಲಿ ಪ್ರತಿ ವರ್ಷವೂ ಪದಕ ಪಡೆದು 40-42 ಪದಕ ತನ್ನದಾಗಿಸಿಕೊಂಡಿದ್ದು ತೀರಾ ಸೌಮ್ಯ ಸ್ವಭಾವದನಾಗಿದ್ದು, ಸಣ್ಣ ಮಗು ಕರೆದುಕೊಂಡು ಹೋದರೂ ಹೋಗುತ್ತಿದ್ದ ಎನ್ನುತ್ತಾರೆ ಕೋಣದ ಯಜಮಾನ ರವೀಂದ್ರ ಕುಮಾರ್.
2012-13ರಲ್ಲೇ ಕಂಬಳದಿಂದ ನಿವೃತ್ತನಾಗಿದ್ದರೂ, ಕಳೆದ 8 ವರ್ಷದಿಂದ ಮನೆಮಂದಿ ತಮ್ಮ ಕುಟುಂಬದ ಸದಸ್ಯನಂತೆ ಆತನನ್ನು ಸಾಕಿ ಸಲಹಿದ್ದಾರೆ. ಮೃತ ಪಟ್ಟ ಕೋಣ ಅಪ್ಪುವನ್ನು ಮನೆಯವರು ಕುಟುಂಬ ಸದಸ್ಯರ ಶವಸಂಸ್ಕಾರದಂತೆ ಎಲ್ಲ ಮರ್ಯಾದೆ ಸಲ್ಲಿಸಿ, ಕಂಬಳ ಕೂಟದಲ್ಲಿ ಪಡೆದ ಶಾಲು ಗಂಧದ ಹಾರಗಳನ್ನು ಸಮರ್ಪಿಸಿದರು.