DAKSHINA KANNADA
ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿ ಸಮಿತಿಯಿಂದ ಅಧಿಕಾರ ಸ್ವೀಕಾರ, ಶಾಸಕ ಅಂಗಾರ ಅಧ್ಯಕ್ಷರಾಗಿ ನಿಯುಕ್ತರಾದ ಬಳಿಕ ತಣ್ಣಗಾದ ಸದಸ್ಯತ್ವ ವಿವಾದ……
ಸುಬ್ರಹ್ಮಣ್ಯ ನವೆಂಬರ್ 9: ರಾಜ್ಯದ ಶ್ರೀಮಂತ ದೇಗುಲವಾದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಅಭಿವೃದ್ಧಿ ಸಮಿತಿಯು ಅಧಿಕಾರ ಸ್ವೀಕರಿಸಿತು. ಸುಳ್ಯ ಶಾಸಕ ಎಸ್.ಅಂಗಾರರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಸರಕಾರ ನೇಮಿಸಿದ್ದು, ಅಧ್ಯಕ್ಷರ ಜೊತೆಗೆ ಸಮಿತಿ ಆರು ಮಂದಿ ಸದಸ್ಯರು ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಕ್ಷೇತ್ರಕ್ಕೆ 8 ಮಂದಿ ಸದಸ್ಯರನ್ನು ಒಳಗೊಂಡ ವ್ಯವಸ್ಥಾಪನ ಸಮಿತಿಯು ರಾಜ್ಯ ಸರಕಾರದ ಧಾರ್ಮಿಕದತ್ತಿ ಇಲಾಖೆಯ ಮುಖಾಂತರ ರಚನೆಯಾಗುತ್ತಿತ್ತು. ಆ ಬಳಿಕದಲ್ಲಿ ಕ್ಷೇತ್ರದ ಅಭಿವೃದ್ಧಿ, ಚಟುವಟಿಕೆಗಳು ವ್ಯವಸ್ಥಾಪನ ಸಮಿತಿ ಸದಸ್ಯರ, ಸಮಿತಿಯ ನಿರ್ಣಯದಂತೆ ನಡೆಯುತ್ತದೆ. ಆದರೆ ಸರಕಾರ ಈವರೆಗೆ ವ್ಯವಸ್ಥಾಪನಾ ಸಮಿತಿ ರಚನೆಯ ಬಗ್ಗೆ ಯಾವುದೇ ಸೂಚನೆ ನೀಡದಿರುವ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಮಿತಿ ಅಥವಾ ಅಭಿವೃದ್ಧಿ ಪ್ರಾಧಿಕಾರದ ರಚನೆಯಾಗುವುದು ಬಹುತೇಕ ಸ್ಪಷ್ಟವಾಗಿತ್ತು.
ಸರಕಾರ ಅಭಿವೃದ್ಧಿ ಪ್ರಾಧಿಕಾರ ರಚಿಸುತ್ತದೆ ಎಂದಾದಲ್ಲಿ ಪ್ರಾಧಿಕಾರ ರಚನೆ ಆಗುವಲ್ಲಿವರೆಗೆ ಸರಕಾರ ಅಭಿವೃದ್ಧಿ ಸಮಿತಿ ರಚಿಸುತ್ತದೆ. ಇದರಲ್ಲಿ ಐವರು ಸದಸ್ಯರನ್ನು ಒಳಗೊಳ್ಳಲಿದ್ದು, ಪ್ರಾಧಿಕಾರ ರಚನೆ ಆಗುವಲ್ಲಿ ವರೆಗೆ ಕ್ಷೇತ್ರದ ಆಡಳಿತ, ಅಭಿವೃದ್ಧಿ ಕೆಲಸಗಳ ಬಗ್ಗೆ ಈ ಸಮಿತಿ ಜವಾಬ್ದಾರಿ ವಹಿಸಿಕೊಳ್ಳಲಿದೆ. ಪಿ.ಜಿ.ಎಸ್.ಪ್ರಸಾದ್, ಮನೋಜ್ ರೈ, ಪ್ರಸನ್ನ ತಣೀರುಪಂಥ, ಎಸ್.ಮೋಹನರಾಮ,ವನಜಾ ಭಟ್ ಸುಬ್ರಹ್ಮಣ್ಯ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿಗಳು ಈ ಸಮಿತಿಯ ಸದಸ್ಯರಾಗಿದ್ದಾರೆ.
ಆಯ್ಕೆಯಾದ ಈ ಸದಸ್ಯರು ಮೂರು ವರ್ಷಗಳ ಕಾಲ ಅಭಿವೃದ್ಧಿ ಸಮಿತಿಯ ಸದಸ್ಯರಾಗಿರಲಿದ್ದಾರೆ.ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶಾಸಕ ಎಸ್. ಅಂಗಾರ ಸಮಿತಿಯ ಮುಂದಿರುವ ಜವಾಬ್ದಾರಿಗಳ ಕುರಿತು ಸದಸ್ಯರೊಂದಿಗೆ ಚರ್ಚಿಸಿದರು. ಮಾಸ್ಟರ್ ಪ್ಲಾನ್ ಕಾಮಗಾರಿಯನ್ನು ಶೀಘ್ರಗೊಳಿಸುವುದು, ಮುಂಬರುವ ಜಾತ್ರೋತ್ಸವಕ್ಕೆ ಕ್ಷೇತ್ರದಲ್ಲಿ ಸಕಲ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆಯೂ ಚರ್ಚೆ ನಡೆಯಿತು. ದಲಿತ ಶಾಸಕ ಕುಕ್ಕೆ ಸುಬ್ರಹ್ಮಣ್ಯ ದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಬಳಿಕ ಕ್ಷೇತ್ರದ ಸಮಿತಿಯಲ್ಲಿ ಸದಸ್ಯತ್ವ ನೀಡಲಿಲ್ಲ ಎನ್ನುವ ಆಕ್ರೋಶ ಇದೀಗ ತಣ್ಣಗಾಗಿದೆ. ಕ್ಷೇತ್ರದ ಮೂಲನಿವಾಸಿಗಳಾದ ಮಲೆಕುಡಿಯ ಜನಾಂಗಕ್ಕೆ ಕ್ಷೇತ್ರದ ಆಡಳಿತ ವ್ಯವಸ್ಥೆಯಲ್ಲಿ ಅವಕಾಶವನ್ನು ಈ ಹಿಂದಿನ ಸಮಿತಿಗಳಲ್ಲಿ ನೀಡಲಾಗಿತ್ತು. ಆದರೆ ಅಭಿವೃದ್ಧಿ ಸಮಿತಿಯಲ್ಲಿ ಈ ಅವಕಾಶವನ್ನು ನಿರಾಕರಿಸಲಾಗಿತ್ತು. ಈ ಹಿನ್ನಲೆಯಲ್ಲಿ ಸರಕಾರದ ಅಭಿವೃದ್ಧಿ ಸಮಿತಿಯನ್ನು ವಜಾಗೊಳಿಸುವಂತೆ ಹಾಗೂ ಸಮಿತಿಯಲ್ಲಿ ಮಲೆಕುಡಿಯ ಜನಾಂಗಕ್ಕೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಲಾಗಿತ್ತು.