DAKSHINA KANNADA
ಕುಕ್ಕೆ ಸುಬ್ರಹ್ಮಣ್ಯ ಬ್ರಹ್ಮರಥೋತ್ಸವಕ್ಕೆ ಸ್ವಾಮಿಜಿಗೆ ಆಹ್ವಾನ ನೀಡಿ ಸಂಪ್ರದಾಯ ಪಾಲಿಸಲಿದೆಯೇ ಆಡಳಿತ ಮಂಡಳಿ ?
ಕುಕ್ಕೆ ಸುಬ್ರಹ್ಮಣ್ಯ ಬ್ರಹ್ಮರಥೋತ್ಸವಕ್ಕೆ ಸ್ವಾಮಿಜಿಗೆ ಆಹ್ವಾನ ನೀಡಿ ಸಂಪ್ರದಾಯ ಪಾಲಿಸಲಿದೆಯೇ ಆಡಳಿತ ಮಂಡಳಿ ?
ಪುತ್ತೂರು ಡಿಸೆಂಬರ್ 12: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸಂಪುಟ ನರಸಿಂಹ ಮಠದ ನಡುವೆ ವಾದ-ವಿವಾದಗಳು ತಾರಕ್ಕೇರಿರುವ ನಡುವೆಯೇ ಇದೀಗ ಕ್ಷೇತ್ರದಲ್ಲಿ ಚಂಪಾಷಷ್ಟಿ ಮಹೋತ್ಸವ ಕಾರ್ಯಕ್ರಮಗಳು ಆರಂಭಗೊಂಡಿದೆ.
ಕ್ಷೇತ್ರದಲ್ಲಿ ನಡೆಯುತ್ತಿರುವ ಸರ್ಪ ಸಂಸ್ಕಾರ ಪೂಜೆ, ಆಶ್ಲೇಷ ಬಲಿ ಪೂಜೆಗಳನ್ನು ಸಂಪುಟ ನರಸಿಂಹ ಮಠದಲ್ಲೂ ಮಾಡುವ ಮೂಲಕ ದೇವಸ್ಥಾನದ ಸೇವೆಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಹಾಗೂ ದೇವಸ್ಥಾನದ ಹೆಸರಿನಲ್ಲಿ ಭಕ್ತಾಧಿಗಳನ್ನು ಮೋಸ ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ನರಸಿಂಹ ಮಠದ ಆಡಳಿತ ಮಂಡಳಿ ವಿರುದ್ಧ ದೇವಸ್ಥಾನದ ಆಡಳಿತ ಮಂಡಳಿ ಮಾಡುತ್ತಿದೆ.
ಅಲ್ಲದೆ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗವನ್ನು ಒತ್ತುವರಿ ಮಾಡುವ ಕಾರ್ಯದಲ್ಲೂ ಮಠ ಮಾಡುತ್ತಿದೆ ಎನ್ನುವ ದೂರನ್ನೂ ಕೂಡಾ ದೇವಸ್ಥಾನದ ವತಿಯಿಂದ ಧಾರ್ಮಿಕ ಧತ್ತಿ ಇಲಾಖೆಗೆ ನೀಡಲಾಗಿದೆ.
ಈ ಎಲ್ಲಾ ಆರೋಪಗಳ ನಡುವೆ ಇದೀಗ ಹಾವು-ಮುಂಗುಸಿಯಂತಿರುವ ಮಠ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಮುಂದೆ ಇದೀಗ ಒಂದು ಗೊಂದಲ ಕಾಡಲಾರಂಭಿಸಿದೆ. ಕ್ಷೇತ್ರದಲ್ಲಿ ಚಂಪಾಷಷ್ಠಿ ಮಹೋತ್ಸವದ ಹಿನ್ನಲೆಯಲ್ಲಿ ನಡೆಯುವ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವದ ಸಂದರ್ಭ ಮಠದ ಸ್ವಾಮೀಜಿಗಳನ್ನು ರಥೋತ್ಸವಕ್ಕೆ ಕರೆಯುವ ಸಂಪ್ರದಾಯ ಹಿಂದಿನಿಂದಲೂ ಬೆಳೆದು ಬಂದಿರುವಂತದ್ದು.
ಆದರೆ ಈ ಬಾರಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮಠದ ಸ್ವಾಮೀಜಿಗಳ ನಡುವೆ ಬಹಿರಂಗ ವಾಕ್ಸಮರ ತಾರಕಕ್ಕೇರಿರುವ ಹಿನ್ನಲೆಯಲ್ಲಿ ಎರಡೂ ಕಡೆಯಿಂದಲೂ ದ್ವೇಷ ಕಾರಲಾರಂಭಿಸಿದೆ.
ಈ ಹಿನ್ನಲೆಯಲ್ಲಿ ಸ್ವಾಮೀಜಿಗಳಿಗೆ ಬ್ರಹ್ಮರಥ ಏರುವಂತೆ ದೇವಸ್ಥಾನದ ಆಡಳಿತ ಮಂಡಳಿ ಆಹ್ವಾನ ನೀಡುವುದೋ, ಒಂದು ವೇಳೆ ನೀಡಿದರೂ ಸ್ವಾಮೀಜಿ ಈ ಆಹ್ವಾನವನ್ನು ಮನ್ನಿಸುವರೋ ಎನ್ನುವ ಚರ್ಚೆ ಇದೀಗ ಆರಂಭಗೊಂಡಿದೆ.
ದೇವಸ್ಥಾನದ ಆಡಳಿತ ಮಂಡಳಿ ಸುಬ್ರಹ್ಮಣ್ಯ ದೇವಸ್ಥಾನಕ್ಕೂ, ಸಂಪುಟ ನರಸಿಂಹ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ವಿಚಾರವನ್ನು ಜಾಹೀರಾತಿನ ಮೂಲಕ ಭಕ್ತಾಧಿಗಳಿಗೆ ನೀಡುತ್ತಿರುವ ನಡುವೆಯೇ ಸಂಪುಟ ನರಸಿಂಹ ಮಠ ದೇವಸ್ಥಾನ ಮಠಕ್ಕೆ ಸಂಬಂಧಿಸಿದ್ದು ಎನ್ನುವ ರೀತಿಯ ವಾದವನ್ನು ಮಂಡಿಸುತ್ತಿರುವುದು ಇತ್ತೀಚಿನ ಕೆಲವು ದಿನಗಳಲ್ಲಿ ಹೆಚ್ಚಾಗುತ್ತಿರುವುದು ಈ ಗೊಂದಲಕ್ಕೆ ಪುಷ್ಠಿಯನ್ನೂ ನೀಡುತ್ತಿದೆ.