DAKSHINA KANNADA
ಕುಕ್ಕೆ ಸುಬ್ರಹ್ಮಣ್ಯ ಬಂಡಿ ಉತ್ಸವದೊಂದಿಗೆ ವಾರ್ಷಿಕ ಜಾತ್ರೋತ್ಸವಕ್ಕೆ ತೆರೆ
ಕುಕ್ಕೆ ಸುಬ್ರಹ್ಮಣ್ಯ ಡಿಸೆಂಬರ್ 25: ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ನಡೆಯುತ್ತಿದ್ದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿದೆ. ಜಾತ್ರೋತ್ಸವದ ಕೊನೆ ದಿನದ ಧಾರ್ಮಿಕ ಆಚರಣೆಯಾಗಿ ಸುಬ್ರಹ್ಮಣ್ಯ ಸ್ವಾಮಿಗೆ ಬಂಡಿ ಉತ್ಸವ ನೆರವೇರಿದೆ. ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ನಡೆಯುವ ಈ ಬಂಡಿ ಉತ್ಸವದಲ್ಲಿ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಭಾಗವಹಿಸುವ ಮೂಲಕ ಈ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದರು.
ಬಂಡಿ ಉತ್ಸವದ ದಿನದಂದು ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ ವೈದಿಕ ವಿಧಿ-ವಿಧಾನ ನೆರವೇರಿಸಿದರು. ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವ ಶಿಷ್ಠ ಸಂಪ್ರದಾಯದ ಪ್ರಕಾರ ಇಳಿಸುವ ಮೂಲಕ ಈ ಬಾರಿಯ ಜಾತ್ರೋತ್ಸವಕ್ಕೆ ಅಧಿಕೃತ ತೆರೆ ಎಳೆಯಲಾಗಿದೆ.
ಉತ್ಸವದ ನಿಮಿತ್ತ ಶ್ರೀ ದೇವಳದ ಹೊರಾಂಗಣದ ಸುತ್ತಲೂ ನೀರನ್ನು ಮದ್ಯಾಹ್ನದ ನಂತರ ತುಂಬಿಸಲಾಗಿತ್ತು. ರಾತ್ರಿ ಮಹಾಪೂಜೆಯ ಬಳಿಕ ನೀರಿನಲ್ಲಿ ಶ್ರೀ ದೇವರ ದೀಪಾರಾಧನೆಯುಕ್ತ ಪಾಲಕಿ ಉತ್ಸವ ನಡೆಯುತ್ತದೆ. ನಂತರ ನೀರಿನಲ್ಲಿ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವ ನಡೆಯುತ್ತದೆ. ವಿವಿಧ ಸಂಗೀತ ಸುತ್ತುಗಳ ಪಾಲಕಿ ಉತ್ಸವ ನೀರಿನಲ್ಲಿ ನಡೆದ ಬಳಿಕ ಕ್ಷೇತ್ರದಲ್ಲಿ ನಡೆಯುವ ಚಂಪಾಷಷ್ಠಿ ಉತ್ಸವಗಳು ಸಮಾಪ್ತಿಯಾಗುತ್ತದೆ.
ಬಂಡಿ ಉತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಹೊರಾಂಗಣ ತುಂಬಾ ತುಂಬಿದ ನೀರಿನಲ್ಲಿ ಬಂಡು ಉತ್ಸವ ನಡೆದ ಬಳಿಕ ಇನ್ನೊಂದು ಆಕರ್ಷಣೆ ಭಕ್ತರನ್ನು ಸಂತಸ ಕಡಲಲ್ಲಿ ತೇಲಿಸುತ್ತದೆ. ಅದೇನೆಂದರೆ ಹೊರಾಂಗಣದಲ್ಲಿರುವ ನೀರಿನಲ್ಲಿ ದೇವಸ್ಥಾನದ ಆನೆ ಯಶಸ್ವಿಯ ನೀರಾಟ ಮತ್ತು ತುಂಟಾಟ. ನೀರಿನಲ್ಲಿ ಹೊರಳಾಡಿ ಸಂತೋಷ ಪಡುವುದರೊಂದಿಗೆ, ಮಕ್ಕಳೊಂದಿಗೆ ನೀರಾಟವಾಡಿ ಒಂದು ಕಡೆ ಆನೆ ಸಂಭ್ರಮಿಸಿದರೆ,ಇನ್ನೊಂದೆಡೆ ಪುಟಾಣಿಗಳು ಆನೆಯ ತುಂಟಾಟಕ್ಕೆ ಸಂಭ್ರಮಿಸುತ್ತಾರೆ. ಅಲ್ಲದೆ ಆನೆಯೊಂದಿಗೆ ನೀರಿನಲ್ಲಿ ಪುಟಾಣಿ ಮಕ್ಕಳೂ ಒದ್ದೆಯಾಗಿ ಆಟವಾಡುವುದು ಬಂಡಿ ಉತ್ಸವದ ಸಂಭ್ರಮದ ಆಕರ್ಷಣೆಯೂ ಆಗಿದೆ.