Connect with us

    DAKSHINA KANNADA

    ಕುಕ್ಕೆ ಸುಬ್ರಹ್ಮಣ್ಯ ಮಾಸ್ಟರ್ ಪ್ಲಾನ್ ಕಾಮಗಾರಿಯಲ್ಲಿ ಅವ್ಯವಹಾರ ತನಿಖೆಗೆ- ಕೋಟ ಶ್ರೀನಿವಾಸ ಪೂಜಾರಿ

    ಮಂಗಳೂರು ಜೂನ್ 13:ರಾಜ್ಯದ ಶ್ರೀಮಂತ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಹಲವಾರು ನ್ಯೂನ್ಯತೆಗಳು ಕಂಡು ಬಂದಿದ್ದು ಎಲ್ಲವನ್ನೂ ತನಿಖೆ ನಡೆಸಲು ಇದೀಗ ಸರಕಾರ ತೀರ್ಮಾನಿಸಿದೆ. ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ 180 ಕೋಟಿ ರೂಪಾಯಿ ವೆಚ್ಚದ ಮಾಸ್ಟರ್ ಪ್ಲಾನ್ ಯೋಜನೆಯಲ್ಲಿ ನಡೆದ ಒಳಚರಂಡಿ ಕಾಮಗಾರಿ, ವಸತಿ ಸಮುಚ್ಛಯ ಕಾಮಗಾರಿಯು ಕಳೆಪೆಯಾಗಿದೆ ಎನ್ನುವ ಆರೋಪ‌ ಕೇಳಿ ಬಂದಿತ್ತು. ಇದೀಗ ಎಚ್ಚೆತ್ತುಕೊಂಡಿರುವ ಸರಕಾರ ಈ ಎಲ್ಲಾ ಕಾಮಗಾರಿಗಳ ತನಿಖೆ ನಡೆಸಲು ತೀರ್ಮಾನಿಸಿದೆ.

    ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸುಮಾರು 180 ಕೋಟಿ ರೂಪಾಯಿ ವೆಚ್ಚದ ಮಾಸ್ಟರ್ ಪ್ಲಾನ್ ತಯಾರಿಸಲಾಗಿದ್ದು, ಇದರ ಅಡಿಯಲ್ಲಿ ಕಾಮಗಾರಿ ನಡೆದ ಮಲಿನ ನೀರಿನ ಶುದ್ಧೀಕರಣ ಘಟಕ ಸಂಪೂರ್ಣ ಪ್ಲಾಪ್ ಆಗಿದೆ. ಮಾಸ್ಟರ್ ಪ್ಲಾನ್ ನ 70 ಕೋಟಿಯ ಮೊದಲನೇ ಹಂತದ ಕಾಮಗಾರಿಯಾದ ಒಳಚರಂಡಿ ನೀರಿನ ಶುದ್ದೀಕರಣ ಘಟಕ ಸಮರ್ಪಕ ನಿರ್ವಹಣೆಯಿಲ್ಲದ ಕಾರಣ ಕೊಳಚೆ ನೀರೇ ಇದೀಗ ಕುಮಾರಧಾರಾ ನದಿಯನ್ನು ಸೇರುತ್ತಿದೆ. ಇದೇ ನೀರು ಭಕ್ತರ ತೀರ್ಥಸ್ನಾನದ ಘಟ್ಟಕ್ಕೂ, ಕುಡಿಯುವ ನೀರಿನ ಡ್ಯಾಂಗಳಿಗೂ ಹರಿಯುತ್ತಿದೆ.

    ಅಲ್ಲದೆ ಆದಿ ಸುಬ್ರಹ್ಮಣ್ಯದಲ್ಲಿ ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ 180 ಕೊಠಡಿಗಳಿರುವ ಕಟ್ಟಡದ ಕಾಮಗಾರಿ ಮುಗಿದು 5 ವರ್ಷಗಳಾಗಿದ್ದರೂ, ವಸತಿ ಸಮುಚ್ಛಯವನ್ನು ಭಕ್ತರ ಉಪಯೋಗಕ್ಕೆ ಬಳಸಿಕೊಂಡಿಲ್ಲ. ಅಲ್ಲದೆ ವಸತಿ ಸಮುಚ್ಛಯದ ಕೊಠಡಿಗಳ ಫರ್ನಿಚರ್ ವ್ಯವಸ್ಥೆಗಾಗಿ ಮತ್ತೆ ಹೆಚ್ಚುವರಿಯಾಗಿ 4.90 ಕೋಟಿ ರೂಪಾಯಿ ವೆಚ್ಚವನ್ನೂ ಬಳಸಲಾಗಿದೆ. ಇದರ ಟೆಂಡರ್ ಪ್ರಕ್ರಿಯೆಯಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳಲಾಗಿಲ್ಲ ಎನ್ನುವ ಆರೋಪವಿತ್ತು. ಇದೀಗ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಈ ಎಲ್ಲಾ ಅವ್ಯವಹಾರಗಳ ತನಿಖೆ ನಡೆಸಲು ತೀರ್ಮಾನಿಸಿದ್ದು, ಒಳಚರಂಡಿ ಕಾಮಗಾರಿ ನಡೆಸಿದ ಅಧಿಕಾರಿಗಳಿಂದ ಸಮಗ್ರ ಮಾಹಿತಿಯನ್ನು ವಾರದ ಒಳಗೆ ಪಡೆದುಕೊಳ್ಳಲು ತೀರ್ಮಾನಿಸಿದ್ದಾರೆ. ಅಲ್ಲದೆ ಮಾಸ್ಟರ್ ಪ್ಲಾನ್ ಯೋಜನೆಗೆ ಅಡೆತಡೆಯಾಗಿರುವ ನರಸಿಂಹ ಮಠದ ವ್ಯಾಜ್ಯವನ್ನೂ ಬಗೆಹರಿಸುವ ತೀರ್ಮಾನಕ್ಕೂ ಬರಲಾಗಿದೆ.

    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಸಮಗ್ರ ಅಭಿವೃದ್ಧಿಗಾಗಿ 180 ಕೋಟಿ ವೆಚ್ಚ ಮೌಲ್ಯದ ಈ ಮಾಸ್ಟರ್ ಪ್ಲಾನ್ ಯೋಜನೆಯನ್ನು ಘೋಷಿಸಲಾಗಿತ್ತು. ಆದರೆ ಯೋಜನೆ ಕಾಮಗಾರಿಗಳು ಆರಂಭಗೊಂಡು 12 ವರ್ಷಗಳು ಕಳೆದರೂ, ಇಂದಿಗೂ ಕೇವಲ 40 ಶೇಕಡಾ ಕಾಮಗಾರಿಗಳು ಮಾತ್ರ ಮುಕ್ತಾಯಗೊಂಡಿದ್ದರೆ,ಅವುಗಳಲ್ಲೂ ಕಳಪೆ ಕಾಮಗಾರಿಗಳ ಆರೋಪ ಕೇಳಿ ಬಂದಿತ್ತು. ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಸ್ಥಾನಗಳಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಿಗೆ ಈ ಹಿಂದೆ ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರನಿಗೆ ಮುಂಗಡವಾಗಿ ಹಣ ಪಾವತಿಸುವ ವ್ಯವಸ್ಥೆಯಿತ್ತು. ಆದರೆ ಇದೀಗ ಸರಕಾರ ಈ ವ್ಯವಸ್ಥೆಯನ್ನು ನಿಲ್ಲಿಸಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕವೇ ಹಣ ಪಾವತಿಸಲು ಸರಕಾರ ತೀರ್ಮಾನಿಸಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *