ಸುಬ್ರಹ್ಮಣ್ಯ, ಆಗಸ್ಟ್ 22: ನಾಗರ ಪಂಚಮಿಯ ಶುಭದಿನವಾದ ಸೋಮವಾರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಭಕ್ತ ಮತ್ತು ಹೈದರಬಾದ್‌ನ ಎಎಂಆರ್ ಗ್ರೂಪ್ ಆಡಳಿತ ನಿರ್ದೇಶಕ ಎ.ಮಹೇಶ್ ರೆಡ್ಡಿ ಸುಮಾರು 7 ಲಕ್ಷ ರೂ ಮೌಲ್ಯದ ಪುಂಗನೂರು ತಳಿಯ 4 ಗೋವುಗಳನ್ನು ದಾನವಾಗಿ ನೀಡಿದ್ದಾರೆ.
ಶ್ರೀ ದೇವಳದ ನಾಗಪ್ರತಿಷ್ಠಾ ಮಂಟಪದ ಬಳಿ ಗೋವುಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು.ಬಳಿಕ ವಿವಿಧ ವೈದಿಕ ವಿಧಿ ವಿಧಾನಗಳ ಮೂಲಕ ಗೋವುಗಳನ್ನು ಶ್ರೀ ದೇವಳಕ್ಕೆ ಹಸ್ತಾಂತರಿಸಲಾಯಿತು. ಗಿಡ್ಡ ತಳಿಗೆ ಹೆಸರುವಾಸಿಯಾಗಿರುವ ಪುಂಗನೂರು ದನದ ಹಾಲನ್ನೇ ತಿರುಪತಿಯ ತಿಮ್ಮಪ್ಪನಿಗೆ ಹಾಲಾಭಿಷೇಕಕ್ಕೆ ಬಳಸುತ್ತಾರೆ ಎನ್ನಲಾಗುತ್ತಿದೆ.
ಹೈದರಬಾದ್ ಮೂಲದ ಉದ್ಯಮಿಗಳಾದ ಎ.ಮಹೇಶ್ ರೆಡ್ಡಿಯವರು ಕುಕ್ಕೆ ಸುಬ್ರಹ್ಮಣ್ಯನ ಅಪ್ರತಿಮ ಭಕ್ತರಾಗಿದ್ದು ಈ ಹಿಂದೆ ಸುಮಾರು ರೂ 27 ಲಕ್ಷದಲ್ಲಿ ಬೋಜನ ಪ್ರಸಾದ ತಯಾರಿಕಾ ಮತ್ತು ಲಾಡು ಪ್ರಸಾದ ತಯಾರಿಕಾ ಯಂತ್ರೋಪಕರಣಗಳನ್ನು, ಷಣ್ಮುಖ ಪ್ರಸಾದ ಬೋಜನ ಶಾಲೆಗೆ ಬೋಜನ ಪ್ರಸಾದ ವಿತರಣೆಗೆ ಗಾಡಿಗಳನ್ನು ನೀಡಿದ್ದರು.



