Connect with us

LATEST NEWS

ಅಕ್ಟೋಬರ್ 21 ರಂದು “ಕುಡ್ಲದ ಪಿಲಿಪರ್ಬ 2023” – ಕರಾವಳಿಯ ಜನಪ್ರಿಯ 15 ಹುಲಿವೇಷ ತಂಡಗಳ ನಡುವೆ ಸ್ಪರ್ಧೆ

ಮಂಗಳೂರು ಅಕ್ಟೋಬರ್ 17: ಕುಡ್ಲದ ಪಿಲಿಪರ್ಬ 2023 ಅಕ್ಟೋಬರ್ 21 ರಂದು ಕೇಂದ್ರ ಮೈದಾನದಲ್ಲಿ ನಡೆಯಲಿದ್ದು, ಈ ಬಾರಿ ಜಿಲ್ಲೆಯ 15 ಜನಪ್ರಿಯ ಹುಲಿವೇಷ ತಂಡಗಳು ಭಾಗವಹಿಸಲಿದೆ ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.


ಮಾಧ್ಯಮಗೊಷ್ಠಿಯಲ್ಲಿ ಮಾಹಿತಿ ನೀಡಿದ ಅವರು ದ್ವಿತೀಯ ವರ್ಷದ “ಕುಡ್ಲದ ಪಿಲಿಪರ್ಬ-2023” ದ ಹುಲಿವೇಷ ಸ್ಪರ್ಧಾಕೂಟವು ಇದೇ ಅಕ್ಟೋಬರ್ 21 ರ ಶನಿವಾರದಂದು ಜಿಲ್ಲೆಯ ಕೇಂದ್ರ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಗೆ ವೈಭವದಿಂದ ಆರಂಭವಾಗಲಿದೆ.

ಕೇಂದ್ರ ಮೈದಾನದ ಭವ್ಯ ಹಾಗೂ ವಿಶಾಲ ವೇದಿಕೆಯಲ್ಲಿ, ಜಿಲ್ಲೆಯ ಅತ್ಯಂತ ಪರಿಣಿತ ತೀರ್ಪುಗಾರರ ಸಮ್ಮುಖದಲ್ಲಿ, ಕರಾವಳಿಯ ಜನಪ್ರಿಯ 15 ಹುಲಿವೇಷ ತಂಡಗಳು ಸ್ಪರ್ಧಾಕೂಟದಲ್ಲಿ ಪಾಲ್ಗೊಳ್ಳಲಿದ್ದು, ಇಡೀ ದಿನ ಕಡಲನಗರಿ ಹುಲಿಗಳ ಭರ್ಜರಿ ಘರ್ಜನೆಗೆ ಸಾಕ್ಷಿಯಾಗಲಿದೆ. ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಮಕ್ಕಳಿಂದ ಹಿಡಿದು ಹಿರಿಯರ ತನಕ ಪ್ರತಿಯೊಬ್ಬ ಕಲಾಪ್ರೇಮಿಗೂ ಮುಕ್ತ ಅವಕಾಶವಿದ್ದು, ಸ್ಪರ್ಧಾಕೂಟದಲ್ಲಿ ಒಂದಕ್ಕಿಂತ ಒಂದು ವಿಭಿನ್ನತೆಯಿಂದ ಕೂಡಿರುವ ಹುಲಿವೇಷ ತಂಡಗಳಿಂದ ಇಡೀ ದಿನ ಸ್ಪರ್ಧಾಕೂಟದ ಮನರಂಜನೆಯಲ್ಲಿ ಮಿಂದೇಳುವ ಅವಕಾಶವಿದೆ. ಜನಸಾಮಾನ್ಯರ ಮನರಂಜನೆಯೇ ಈ ಸ್ಪರ್ಧಾಕೂಟದ ಪ್ರಮುಖ ಉದ್ದೇಶವೂ ಆಗಿದೆ.


ಪಿಲಿಪರ್ಬದಲ್ಲಿ ಭಾಗವಹಿಸುವ ಹುಲಿವೇಷ ತಂಡಗಳು ಮೆರವಣಿಗೆಯ ಮೂಲಕ ವೇದಿಕೆಗೆ ಪ್ರವೇಶ ಮಾಡಲಿದ್ದು, 20 ನಿಮಿಷಗಳ ಪ್ರದರ್ಶನ ನೀಡಲಿವೆ. ಪ್ರತಿ ತಂಡವೂ 38 ಕೆ.ಜಿ ಭಾರದ ಅಕ್ಕಿಮುಡಿ ಹಾರಿಸುವುದು ಕಡ್ಡಾಯವಾಗಿದ್ದು, ಕರಿಹುಲಿಗಳು, ಮರಿಹುಲಿಗಳು, ಹಿಮ್ಮೇಳ, ಧರಣಿ ಮಂಡಲ ಹೀಗೆ ಇಡೀ ಕೂಟವು ವೈವಿಧ್ಯತೆಯಿಂದ ಕೂಡಿರಲಿದೆ.

ತುಳುನಾಡಿನ ಸಮಸ್ತ ದೈವ, ದೇವರುಗಳ ಆರ್ಶೀವಾದದಿಂದ ಕಳೆದ ಬಾರಿಯ ಪ್ರಥಮ ವರ್ಷದ ಪಿಲಿಪರ್ಬವು ಅತ್ಯಂತ ಯಶಸ್ವಿಯಾಗಿದ್ದು ಕಳೆದ ಬಾರಿಗಿಂತ ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆ ಇದ್ದು ಎಲ್ಲಾ ವಿಭಾಗಗಳಲ್ಲಿಯೂ ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸ್ಪರ್ಧಾಕೂಟ ನಡೆಯುವ ಮೈದಾನದಲ್ಲಿ 5 ಸಾವಿರ ಮಂದಿ ಕುಳಿತು ವೀಕ್ಷಿಸಬಹುದಾದ ಸುಸಜ್ಜಿತ ಪ್ರೇಕ್ಷಕ ಗ್ಯಾಲರಿ ನಿರ್ಮಿಸಲಾಗಿದ್ದು, ಅಲ್ಲಿಯೇ ದೊಡ್ಡ ಪರದೆಯ ವ್ಯವಸ್ಥೆಯನ್ನೂ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬರಲು ಉತ್ಸುಕರಾಗಿದ್ದು ಜನಜಂಗುಳಿಯಿಂದಾಗಿ ಬರಲು ಸಾಧ್ಯವಾಗದೇ ಇರುವ ಹಿರಿಯರು ಹಾಗೂ ಮಕ್ಕಳಿಗಾಗಿ ಮನೆಯಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸಲು ನೇರ ಪ್ರಸಾರದ ವ್ಯವಸ್ಥೆಯನ್ನೂ ಮಾಡಲಾಗಿದೆ. ತಮ್ಮ ವಾಹನಗಳಲ್ಲಿ ಬರುವವರಿಗೆ ಮೈದಾನದಲ್ಲಿ ಅಚ್ಚುಕಟ್ಟಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಲಿರುವ ಗಣ್ಯರು, ಹಾಗೂ ದಾನಿಗಳಿಗೆ ವಿಶೇಷ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸ್ಪರ್ಧಾಕೂಟದಲ್ಲಿ ಪಾಲ್ಗೊಳ್ಳಲಿರುವ 15 ಹುಲಿವೇಷ ತಂಡಗಳು:-

1. ಶಿವಶಕ್ತಿ ಟೈಗರ್ ಕುಂಜತ್ತೂರು ಮಂಜೇಶ್ವರ

2. ವಿಶಾಲ್ ಕ್ರಿಕೆಟರ್ಸ್ ಕೋಡಿಕಲ್

3. ಪಾಂಡೇಶ್ವರ ಶಾರದಾ ಹುಲಿ, ಪಾಂಡೇಶ್ವರ

4. ಜೈ ಹಿಂದ್ ಫ್ರೆಂಡ್ಸ್, ಮಂಕಿ ಸ್ಟ್ಯಾಂಡ್

5. ವಿಸಿಎಸ್, ಮೂಡುಶೆಡ್ಡೆ (ವಿಷ್ಣು ಪಿಲಿಕುಲು)

6. ನಂದಿಗುಡ್ಡ ಫ್ರೆಂಡ್ಸ್ ಬಾಬು ಗುಡ್ಡ

7. ಮುಳುಹಿತ್ಲು ಫ್ರೆಂಡ್ಸ್ ಸರ್ಕಲ್ ಜಗದಂಬಾ ಹುಲಿ

8. ಅಶೋಕ್ ರಾಜ್ ಟೀಮ್ ಕಾಡಬೆಟ್ಟು ಉಡುಪಿ

9. ಎಸ್ ಎಫ್ ಸಿ ಸೋಮೇಶ್ವರ

10. ಎಸ್ ಕೆ ಬಿ ಟೈಗರ್ಸ್ ಕುಂಪಲ

11. ಪುರಲ್ದಪ್ಪೆನ ಮೋಕೆದ ಬೊಲ್ಲಿಲು ಪೊಳಲಿ ಟೈಗರ್ಸ್

12. ಮಂಗಳೂರ್ ಫ್ರೆಂಡ್ಸ್ ಟೈಗರ್ಸ್ ಮುಳುಹಿತ್ಲು

13. ಯಂಗ್ ಬಾಯ್ಸ್ ಮುಳುಹಿತ್ಲು ಮಂಗಳಾದೇವಿ ಹುಲಿ

14. ಶ್ರೀ ಭದ್ರಕಾಳಿ ಟೈಗರ್ಸ್ ಕುಡ್ಲ

15. ಟೀಮ್ ಕಲ್ಲೇಗ ಟೈಗರ್ಸ್ ಪುತ್ತೂರು
ಕಲಾಪ್ರೇಮಿಗಳು ಕುಟುಂಬಸಮೇತ ಆಗಮಿಸಿ, ದಸರಾ ಸಂಭ್ರಮದ ಜೊತೆಗೆ ಪಿಲಿಪರ್ಬದ ಹುಲಿವೇಷ ಸ್ಪರ್ಧಾಕೂಟದ ರಸದೌತಣ ಸವಿಯಲು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಮುಕ್ತ ಆಹ್ವಾನ ನೀಡುತ್ತಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *