LATEST NEWS
ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ಮುಡಿಗೇರಿದ ಕುಡ್ಲದ ಪಿಲಿಪರ್ಬ- 2024 ರ ಕಿರೀಟ
ಮಂಗಳೂರು ಅಕ್ಟೋಬರ್ 12: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ ನಳಿನ್ ಕುಮಾರ್ ಕಟೀಲ್ ರವರ ಮಾರ್ಗದರ್ಶನ ಹಾಗೂ ಶಾಸಕರಾದ ಡಿ.ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಗರದ ಕೇಂದ್ರ ಮೈದಾನದಲ್ಲಿ ಅದ್ದೂರಿಯಾಗಿ ನಡೆದ ಕುಡ್ಲದ ಪಿಲಿಪರ್ಬ-2024 ಸೀಸನ್-3 ಮುಕ್ತಾಯಗೊಂಡಿದ್ದು,10 ತಂಡಗಳ ನಡುವಿನ ಜಿದ್ದಾಜಿದ್ದಿನ ಸ್ಪರ್ಧಾಕೂಟದಲ್ಲಿ ಅಂತಿಮವಾಗಿ ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ತಂಡವು ಪಿಲಿಪರ್ಬ- 2024 ರ ಕಿರೀಟ ಮುಡಿಗೇರಿಸಿಕೊಂಡಿತು.
ದ್ವಿತೀಯ ಸ್ಥಾನದ ಪ್ರಶಸ್ತಿಯನ್ನು ಪುರಲ್ದಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್ ತಂಡವು ಪಡೆದುಕೊಂಡರೆ, ನಂದಿಗುಡ್ಡ ಫ್ರೆಂಡ್ಸ್ ಬಾಬುಗುಡ್ಡೆ ಹಾಗೂ ಟೀಮ್ ಕಲ್ಲೇಗ ಟೈಗರ್ಸ್ ಪುತ್ತೂರು ತಂಡಗಳು ಜಂಟಿಯಾಗಿ ತೃತೀಯ ಸ್ಥಾನವನ್ನು ಅಲಂಕರಿಸಿದವು.
ಪಿಲಿಪರ್ಬದ ವಿಶೇಷ ಬಹುಮಾನಗಳಾದ “ಕಪ್ಪು ಪಿಲಿ” ಪ್ರಶಸ್ತಿಯನ್ನು ಟ್ಯಾಲೆಂಟ್ ಟೈಗರ್ಸ್ ತುಳುನಾಡು ತಂಡ ಪಡೆದುಕೊಂಡರೆ, ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ತಂಡವು “ಮರಿ ಹುಲಿ” ಪ್ರಶಸ್ತಿಯನ್ನು ಹಾಗೂ ಬಹುನಿರೀಕ್ಷಿತ ಪ್ರಶಸ್ತಿಯಾದ “ಪರ್ಬದ ಪಿಲಿ”ಯನ್ನು ಟೀಮ್ ಕಲ್ಲೇಗ ಟೈಗರ್ಸ್ ಪುತ್ತೂರು ತಂಡ ಪಡೆದುಕೊಂಡಿತು.
ಶಿಸ್ತಿನ ತಂಡವಾಗಿ ಟೀಮ್ ಪರಶುರಾಮ್ ಕುಡ್ಲ ಹೊರ ಹೊಮ್ಮಿದರೆ, ಬಣ್ಣಗಾರಿಕೆ ಹಾಗೂ ಮೆರವಣಿಗೆ ವಿಭಾಗದ ದ್ವಿತೀಯ ಬಹುಮಾನವನ್ನು ಎಸ್.ಕೆ.ಬಿ ಟೈಗರ್ಸ್ ಕುಂಪಲ ತಂಡವು ಪಡೆಯಿತು.
ಮುಡಿ ವಿಭಾಗದಲ್ಲಿ ನಂದಿಗುಡ್ಡ ಫ್ರೆಂಡ್ಸ್ ಬಾಬುಗುಡ್ಡೆ ಪ್ರಶಸ್ತಿ ಪಡೆದುಕೊಂಡರೆ, ಧರಣಿ ಮಂಡಲ ಹಾಗೂ ಮೆರವಣಿಗೆ ವಿಭಾಗದ ಪ್ರಥಮ ಸ್ಥಾನವನ್ನು ಎಮ್.ಎಫ್.ಟಿ ಮುಳಿಹಿತ್ಲು, ಹಿಮ್ಮೇಳ ವಿಭಾಗದಲ್ಲಿ ಪುರಲ್ದಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್ ಪ್ರಶಸ್ತಿಗಳನ್ನು ಬಾಚಿಕೊಂಡಿತು. ಕೊನೆಯದಾಗಿ ಭಾಗವಹಿಸಿದ ಎಲ್ಲಾ ತಂಡಗಳಿಗೂ ಪ್ರೋತ್ಸಾಹ ಧನ ನೀಡಿ ಗೌರವಿಸುವ ಮೂಲಕ ಮೂರನೇ ಆವೃತ್ತಿಯ ಪಿಲಿಪರ್ಬಕ್ಕೆ ತೆರೆ ಬಿದ್ದಿತು.
ನಟ-ನಿರ್ದೇಶಕ-ರಾಷ್ಟ್ರಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ, ರಾಜ್ ಬಿ.ಶೆಟ್ಟಿ, ಪ್ರಮೋದ್ ಶೆಟ್ಟಿ, ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಹಾಗೂ ಜನಪ್ರಿಯ ನಟರಾದ ಅರ್ಜುನ್ ಕಾಪಿಕಾಡ್, ವಿನೀತ್ ಕುಮಾರ್, ಸಮತಾ ಅಮೀನ್, ಸೇರಿದಂತೆ ಅನೇಕ ಚಿತ್ರ ತಾರೆಯರ ದಂಡು ಕಾರ್ಯಕ್ರಮದ ಮೆರುಗು ಹೆಚ್ಚಿಸಿತ್ತು.