LATEST NEWS
ಆಧಾರ್ ಕಾರ್ಡ್ ತೋರಿಸಿಲ್ಲವೆಂದು ಶಾಲಾ ಮಕ್ಕಳನ್ನು ಅರ್ಧ ದಾರಿಯಲ್ಲಿ ಇಳಿಸಿದ ಕೆಎಸ್ಆರ್ ಟಿಸಿ ಬಸ್ ಕಂಡಕ್ಟರ್
ಉಳ್ಳಾಲ ಅಗಸ್ಟ್ 24 : ಆಧಾರ ಕಾರ್ಡ್ ತೋರಿಸಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ನಲ್ಲಿ ಶಾಲೆಗೆ ತೆರಳುತ್ತಿದ್ದ ಐವರು ವಿಧ್ಯಾರ್ಥಿನಿಯ ರನ್ನು ಬಸ್ ಕಂಡಕ್ಟರ್ ಅರ್ಧ ದಾರಿಯಲ್ಲೇ ಕೆಳಗಿಳಿಸಿದ ಘಟನೆ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದ ಸ್ಥಳೀಯರು ಕುಂಪಲದಲ್ಲಿ ಬಸ್ ತಡೆದು ನಿರ್ವಾಹಕನನ್ನು ತರಾಟೆ ತೆಗೆದುಕೊಂಡಿದ್ದಾರೆ.
‘ಮಂಗಳೂರು–ಕುಂಪಲ ನಡುವೆ ಸಂಚರಿಸುವ ಕೆಎಸ್‌ಆರ್‌ಟಿಸಿ ನಗರ ಸಾರಿಗೆಯ ಬಸ್‌ನಲ್ಲಿ ಕುಂಪಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ಮತ್ತು ಮೂರನೇ ತರಗತಿಯ ಐವರು ವಿದ್ಯಾರ್ಥಿನಿಯರು ಶಾಲೆಗೆ ಹೊರಟಿದ್ದರು. ಮಕ್ಕಳು ಆಧಾರ್ ಕಾರ್ಡ್ ತೋರಿಸದ ಹಿನ್ನಲೆ ಬಸ್‌ನ ನಿರ್ವಾಹಕ ಹುಸೇನ್ ಸಾಬ್ ಐ ಹಳ್ಳೂರ ಅವರು, ‘ಆಧಾರ್ ಕಾರ್ಡ್ ತೋರಿಸದಿದ್ದರೆ ಉಚಿತ ಪ್ರಯಾಣಕ್ಕೆ ನಿಮಗೆ ಅವಕಾಶ ಇಲ್ಲ’ ಎಂದು ಟಿಕೆಟ್‌ಗೆ ಹಣ ಕೇಳಿದ್ದರು. ಹಣ ನೀಡಿ ಟಿಕೆಟ್ ಪಡೆಯದ ಕಾರಣಕ್ಕೆ ಆ ಹೆಣ್ಣು ಮಕ್ಕಳನ್ನು ಬಸ್ಸಿನಿಂದ ಅರ್ಧ ದಾರಿಯಲ್ಲೇ ಕೆಳಗೆ ಇಳಿಸುವ ಮೂಲಕ ನಿರ್ವಾಹಕ ಅಮಾನವೀಯವಾಗಿ ವರ್ತಿಸಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯಕರು ಕುಂಪಲ ಶಾಲೆಯ ಎದುರು ಸಂಜೆ ಅದೇ ಬಸ್ ಅನ್ನು ತಡೆದು ನಿಲ್ಲಿಸಿ ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡರು. ಕೆಎಸ್ಆರ್‌ಟಿಸಿ ಅಧಿಕಾರಿಗಳನ್ನು ಸಂಪರ್ಕಿಸಿದ ಅವರು, ‘ಮಕ್ಕಳ ಜೊತೆ ಮಾನವೀಯವಾಗಿ ವರ್ತಿಸಿದ ನಿರ್ವಾಹಕನ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.