DAKSHINA KANNADA
ಕೊಯಿಲಾ ಜಾನುವಾರು ಕೇಂದ್ರದ ಸಾರ್ವಜನಿಕ ಪ್ರವೇಶ ನಿಷೇಧ ಬ್ಯಾನರ್ ಗೆ ಕಿಡಿಗೇಡಿಗಳಿಂದ ಹಾನಿ
ಪುತ್ತೂರು ಸೆಪ್ಟೆಂಬರ್ 7: ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲಾ ಜಾನುವಾರು ಸಂವರ್ಧನಾ ಕೇಂದ್ರದಲ್ಲಿ ಮತ್ತೆ ಕಿಡಿಗೇಡಿಗಳ ಲೂಟಿ ಶುರುವಾಗಿದೆ. ಜಾನುವಾರುಗಳ ಕೇಂದ್ರಕ್ಕೆ ಪ್ರವಾಸಿಗರ ಹಾಗೂ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿ ಹಾಕಿದ್ದ ಎಚ್ಚರಿಕೆ ಬ್ಯಾನರ್ ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ.
ಕೊಯಿಲಾ ಫಾರ್ಮ್ ಸುತ್ತ 10 ಕಡೆಗಳಲ್ಲಿ ಈ ಎಚ್ಚರಿಕೆ ಬ್ಯಾನರ್ ಅನ್ನು ಫಾರ್ಮ್ ನ ಅಧಿಕಾರಿಗಳ ಸೂಚನೆಯ ಮೇರೆಗೆ ಸಿಬ್ಬಂದಿಗಳು ಅಳವಡಿಸಿದ್ದರು. ನಿನ್ನೆ ರಾತ್ರಿ ವೇಳೆಗೆ ಫಾರ್ಮ್ ನ ಹಿಂಬದಿಯ ಗೇಟ್ ಬಳಿ ಹಾಕಲಾಗಿದ್ದ ಬ್ಯಾನರನ್ನು ಹರಿಯಲಾಗಿದೆ.
ಸಾರ್ವಜನಿಕರು ಹಾಗೂ ಪ್ರವಾಸಿಗರು ಫಾರ್ಮ್ ಒಳಗೆ ಅಕ್ರಮವಾಗಿ ನುಗ್ಗಿ ಫಾರ್ಮ್ ನಲ್ಲಿ ಅಕ್ರಮ ಚಟುವಟಿಕೆ ಸೇರಿದಂತೆ ಪ್ರಕೃತಿಯ ನಾಶದ ಕೃತ್ಯದಲ್ಲೂ ತೊಡಗಿದ್ದರು.ಕಿಡಿಗೇಡಿಗಳು ಫಾರ್ಮ್ ನ ಸುತ್ತ ಹಾಕುವ ಪ್ಲಾಸ್ಟಿಕ್ ಚೀಲಗಳು, ಬಾಟಲ್ ಗಳನ್ನು ತಿಂದು ಫಾರ್ಮ್ ನಲ್ಲಿರುವ ಹಲವು ಜಾನುವಾರುಗಳು ಸಾವನ್ನಪ್ಪಿದ್ದವು. ಈ ಹಿನ್ನಲೆಯಲ್ಲಿ ಫಾರ್ಮ್ ಒಳಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿತ್ತು.
ಫಾರ್ಮ್ ರಸ್ತೆಯಲ್ಲಿ ಹಾದುಹೋಗುವ ಪ್ರತಿಯೊಬ್ಬರನ್ನೂ ದಾಖಲಿಸಿ ಒಳಗಡರ ಬಿಡಲಾಗುತ್ತಿತ್ತು. ಅಲ್ಲದೆ ಸಿಸಿ ಕ್ಯಾಮಾರಾ ಅಳವಡಿಸಿ ಎಲ್ಲರ ಮೇಲೆ ಕಣ್ಗಾವಲನ್ನೂ ಇಡಲಾಗಿತ್ತು. ನಡುವೆ ಮತ್ತೆ ಕಡಿಗೇಡಿಗಳು ಬ್ಯಾನರ್ ಹರಿದು ತಮ್ಮ ಕುಚೇಷ್ಟೆಯನ್ನು ಮುಂದುವರಿಸಿದ್ದಾರೆ.