LATEST NEWS
28ರ ಬೆಳಿಗ್ಗೆ 11 ಗಂಟೆಗೆ ಜಗತ್ತಿನಾದ್ಯಂತ ಕೋಟಿ ಕಂಠ ಗಾಯನ – ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಲು ಸಚಿವ ಸುನಿಲ್‍ಕುಮಾರ್ ಕರೆ

ಮಂಗಳೂರು ಅಕ್ಟೋಬರ್ 18:- ಮುಂಬರುವ 67ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಉತ್ಸಾಹದಿಂದ ನಾಡಿನಾದ್ಯಂತ ಆಚರಿಸುವ ಹಿನ್ನಲೆಯಲ್ಲಿ ಇದೇ ಅಕ್ಟೋಬರ್ 28ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಜಗತ್ತಿನಾದ್ಯಂತ ಕೋಟಿ ಕಂಠ ಗಾಯನವನ್ನು ಹಮ್ಮಿಕೊಳ್ಳಲಾಗಿದ್ದು, ವಿಶ್ವಾದ್ಯಂತ ಇರುವ ಕನ್ನಡಿಗರು ಭಾಗವಹಿಸುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಇಂಧನ, ಕನ್ನಡ ಮತ್ತು ಸಂಸ್ಕøತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಅವರು ಕರೆ ನೀಡಿದರು.
ಅಕ್ಟೋಬರ್ 28ರ ಬೆಳಗ್ಗೆ 11 ಗಂಟೆಗೆ ಕುವೆಂಪು ವಿರಚಿತ ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ಹುಯಿಲಗೋಲ ನಾರಾಯಣರಾಯರು ರಚಿಸಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ, ಡಾ. ಡಿ.ಎಸ್. ಕರ್ಕಿ ರಚನೆಯ ಹಚ್ಚೇವು ಕನ್ನಡದ ದೀಪ, ಚೆನ್ನವೀರ ಕಣವಿಯವರು ಬರೆದ ವಿಶ್ವ ವಿನೂತನ ವಿದ್ಯಾಚೇತನ ಹಾಗೂ ಹಂಸಲೇಖ ಬರೆದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಆರು ಗೀತೆಗಳನ್ನು ಹಾಡಬೇಕು, ನಾಡಿನ ಮೂಲೆ ಮೂಲೆಗಳಲ್ಲಿ, ಗ್ರಾಮ ಗ್ರಾಮಗಳು ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ, ಈ ದ್ವನಿ ಅನುರಣಿಸಬೇಕು, ನೆಲ, ಜಲ ಹಾಗೂ ಆಕಾಶಗಳಲ್ಲಿಯೂ ಕನ್ನಡ ಧ್ವನಿ ಕೇಳಿಸಬೇಕು, ಅದಕ್ಕಾಗಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸಾರ್ವಜನಿಕರು, ಕನ್ನಡಾಭಿಮಾನಿಗಳು ಅದಕ್ಕೆಂದೇ ರಚಿಸಲಾಗಿರುವ ಕ್ಯೂ ಆರ್ ಉಪಯೋಗಿಸಿ ನೋಂದಾಯಿಸಿಕೊಳ್ಳಬೇಕು ಎಂದರು.

ಕೋಟಿ ಕಂಠ ಗಾಯನದ ನಂತರ ಅವುಗಳ ಫೋಟೋ, ವಿಡಿಯೋ ಹಾಗೂ ಮಾಹಿತಿಯನ್ನು ಆಯಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸಲ್ಲಿಸಿ, ಇಲಾಖೆಯ ಜಾಲತಾಣಕ್ಕೆ ಅಪ್ಲೋಡ್ ಮಾಡಬೇಕು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಇಲಾಖೆ ವತಿಯಿಂದ ಅಭಿನಂದನಾ ಪತ್ರವನ್ನು ನೀಡಲಾಗುವುದು, ಈ ಕಾರ್ಯಕ್ರಮದ ಯಶಸ್ವಿಗೆ ಜಿಲ್ಲೆಯ ವಿದ್ಯಾರ್ಥಿಗಳು, ಸಾರ್ವಜನಿಕರು, ಎಲ್ಲಾ ಸಂಘ ಸಂಸ್ಥೆಗಳು, ಕಲಾವಿದರು, ಕಾರ್ಮಿಕರು, ಸರ್ಕಾರಿ ನೌಕರರು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಒಳಗೊಂಡಂತೆ ಸರ್ವರೂ ಭಾಗವಹಿಸಬೇಕು ಎಂದು ಅವರು ತಿಳಿಸಿದರು.