Connect with us

LATEST NEWS

ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದ ಶಶಿ ತೇವರ್ ಆಲಿಯಾಸ್ ಭಾಸ್ಕರ್ ಬೆಳ್ಚಪಾಡ ಪೊಲೀಸ್ ಬಲೆಗೆ

ಮಂಗಳೂರು ಫೆಬ್ರವರಿ 25: ಇಡೀ ರಾಜ್ಯದಲ್ಲೇ ಬಾರೀ ಸಂಚಲನ ಮೂಡಿಸಿದ್ದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ದರೋಡೆ ಪ್ರಕರಣದಲ್ಲಿ ಪೊಲೀಸರು ಮತ್ತಿಬ್ಬರು ಬಂಧಿಸಿದ್ದಾರೆ. ಬಂಧಿತರು ದರೋಡೆ ಪ್ರಕರಣದಲ್ಲಿ ಭಾಗಿಯಾದ ಸ್ಥಳೀಯರಾಗಿದ್ದು, ಇಡೀ ಪ್ರಕರಣದಲ್ಲಿ ಹೆಚ್ಚಾಗಿ ಕೇಳಿ ಬಂದಿದ್ದ ಶಶಿ ತೇವರ್ ಅದರಲ್ಲಿ ಒಬ್ಬನಾಗಿದ್ದಾನೆ. ಬಂಧಿತರನ್ನು ಬಂಟ್ವಾಳದ ಭಾಸ್ಕರ್ ಬೆಳ್ಚಪಾಡ ಮತ್ತು .ಸಿ.ರೋಡ್ ನಿವಾಸಿ ಮಹಮ್ಮದ್ ನಜೀರ್ ಎಂದು ಗುರುತಿಸಲಾಗಿದೆ.


ಜನವರಿ 17 ರಂದು ಉಳ್ಳಾಲ ಕೆಸಿರೋಡ್ ನಲ್ಲಿ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಹಾಡುಹಗಲೇ ದರೋಡೆ ಮಾಡಲಾಗಿತ್ತು, ಈ ಪ್ರಕರಣ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತಲ್ಲದೇ, ಪೊಲೀಸ್ ಇಲಾಖೆ ವಿರುದ್ದ ಸ್ವತಃ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದರು. ಪ್ರಕರಣ ನಡೆದ ಬೆನ್ನಲ್ಲೇ ನಿದ್ರೆ ಬಿಟ್ಟು ಕೆಲಸ ಮಾಡಿದ ಮಂಗಳೂರು ಪೊಲೀಸರ ತಂಡ ದರೋಡೆ ನಡೆದ ಕೆಲವೇ ದಿನಗಳಲ್ಲಿ ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಿ ದರೋಡೆ ಮಾಡಿದ ಎಲ್ಲಾ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು.


ಆದರೆ ಈ ಪ್ರಕರಣದಲ್ಲಿ ಸ್ಥಳೀಯ ಕೈವಾಡ ಇಲ್ಲದೆ ದರೋಡೆ ಸಾಧ್ಯವಿಲ್ಲ ಎನ್ನುವುದು ಎಲ್ಲರ ವಾದವಾಗಿತ್ತು, ಪೊಲೀಸರಿಗೂ ಕೂಡ ಸ್ಥಳೀಯರ ಕೈವಾಡ ಇತ್ತು ಎನ್ನುವುದು ತಿಳಿದಿತ್ತು. ಪ್ರಕರಣದ ಪ್ರಮುಖ ಆರೋಪಿ ಮುರುಗನ್ ಡಿ ದೇವರ್ ಮತ್ತು ಇತರ ಮೂವರನ್ನು ಕೃತ್ಯ ನಡೆದ ಒಂದೇ ವಾರದಲ್ಲಿ ತಮಿಳುನಾಡಿನಲ್ಲಿ ಬಂಧಿಸಿದ್ದರು. ಅಲ್ಲದೆ ಬಂಧಿತ ಆರೋಪಿಗಳಿಂದ ಸ್ಥಳೀಯರ ಬಗ್ಗೆ ಬಾಯಿ ಬಿಡಿಸಲು ಪೊಲೀಸರು ಪ್ರಯತ್ನಿಸಿದ್ದರು. ಇದೀಗ ಶಶಿ ತೇವರ್ ಎನ್ನುವ ಹೆಸರಲ್ಲಿ ಗುರುತಿಸಿಕೊಂಡಿದ್ದ ಭಾಸ್ಕರ ಬೆಳ್ಚಪ್ಪಾಡ ಎಂಬಾತನನ್ನು ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ. ಭಾಸ್ಕರ್ ನನ್ನು ವಿಚಾರಣೆ ನಡೆಸಿದಾಗ, ಕಳೆದ ಏಳು ವರ್ಷಗಳಿಂದ ಕೆಸಿ ರೋಡ್ ನಿವಾಸಿ ಮಹಮ್ಮದ್ ನಜೀರ್ ಜೊತೆಗೆ ಸಂಪರ್ಕದಲ್ಲಿರುವುದು ಮತ್ತು ಕೋಟೆಕಾರು ಬ್ಯಾಂಕನ್ನು ದರೋಡೆ ಮಾಡಲು ಇತರ ಆರೋಪಿಗಳೊಂದಿಗೆ ಸೇರಿ ಸಂಚು ನಡೆಸಿರುವುದನ್ನೂ ತಿಳಿಸಿದ್ದ.

ಇದರಂತೆ, ಬ್ಯಾಂಕ್ ದರೋಡೆಗೆ ಮಾಹಿತಿ ಕೊಟ್ಟು, ಡಕಾಯಿತಿ ನಡೆಸಬೇಕಾದ ದಿನ ಮತ್ತು ಸಮಯದ ಬಗ್ಗೆಯೂ ತಿಳಿಸಿದ್ದಲ್ಲದೆ, ಸೊಸೈಟಿಯಲ್ಲಿರುವ ಸಿಬಂದಿಗಳ ಬಗ್ಗೆ ಮತ್ತು ಕೃತ್ಯದ ನಂತರ ತಪ್ಪಿಸಿಕೊಂಡು ಹೋಗುವ ಮಾರ್ಗ ಮುಂತಾದ ಮಾಹಿತಿಯನ್ನು ನೀಡಿದ್ದ ಮಹಮ್ಮದ್ ನಜೀರ್ ನನ್ನು ಬಂಧಿಸಲಾಗಿದೆ. ತನಿಖೆಯ ಸಂದರ್ಭದಲ್ಲಿ ಮಹಮ್ಮದ್ ನಜೀರ್ ಸ್ಥಳೀಯವಾಗಿ ಆರೋಪಿಗಳಿಗೆ ಸಹಕಾರ ಕೊಟ್ಟಿರುವುದು ಪತ್ತೆಯಾಗಿದೆ.

ಭಾಸ್ಕರ ಬೆಳ್ಚಪ್ಪಾಡ ಮೂಲತಃ ವಿಟ್ಲ ಸಮೀಪದ ಕನ್ಯಾನ ನಿವಾಸಿಯಾಗಿದ್ದರೂ 25 ವರ್ಷಗಳಿಂದ ಊರು ಬಿಟ್ಟು ಮುಂಬೈ, ದೆಹಲಿ, ಬೆಂಗಳೂರಿನಲ್ಲಿ ನೆಲೆಸಿದ್ದ. ಮುಂಬೈ, ದೆಹಲಿಯಲ್ಲಿ ಬೇರೆ ಬೇರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. 2011ರಲ್ಲಿ ದೆಹಲಿಯಲ್ಲಿ ದರೋಡೆ ಯತ್ನ, 2021ರಲ್ಲಿ ಮುಂಬೈ ಕ್ರೈಂ ಬ್ರಾಂಚ್ ಸಿಐಡಿ ಠಾಣೆ ವ್ಯಾಪ್ತಿಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ, 20222ರಲ್ಲಿ ಕೋಣಾಜೆ ಠಾಣೆಯಲ್ಲಿ ಸುಲಿಗೆ ಪ್ರಕರಣ, 2022ರಲ್ಲಿ ಉಳ್ಳಾಲದಲ್ಲಿ ದರೋಡೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ತಿಳಿದುಬಂದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *