LATEST NEWS
ಜನವರಿ ತಿಂಗಳೊಳಗೆ ಟವರ್ ಅಳವಡಿಕೆ ಕಾರ್ಯ ಪೂರ್ಣಗೊಳಿಸಿ – ಬಿಎಸ್ ಎನ್ಎಲ್ ಅಧಿಕಾರಿಗಳಿಗೆ ಕೋಟ ಸೂಚನೆ
ಚಿಕ್ಕಮಗಳೂರು ಜನವರಿ 08: ಜನವರಿ ತಿಂಗಳೊಳಗೆ ಟವರ್ ಅಳವಡಿಕೆ ಕಾರ್ಯ ಪೂರ್ಣಗೊಳಿ:ಬಿಎಸ್ಎನ್ಎಲ್ ಅಧಿಕಾರಿಗಳ ಸಭೆಯಲ್ಲಿ ಸಂಸದ ಕೋಟ ಖಡಕ್ ಸೂಚನೆ ಚಿಕ್ಕಮಗಳೂರಿನ ಬಿಎಸ್‌ಎನ್ಎಲ್ ನ ಕಛೇರಿಯಲ್ಲಿ ಇಂದು ಉಡುಪಿ ಚಿಕ್ಕಮಗಳೂರು ಸಂಸದರು ದೂರವಾಣಿ ಸಲಹಾ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದು, ಸಭೆಯಲ್ಲಿ ಮಹತ್ತರ ನಿರ್ಣಯವನ್ನು ಕೈಗೊಳ್ಳಲಾಯಿತು. ಜಿಲ್ಲೆಯಲ್ಲಿ ಬಿಎಸ್ಎನ್ಎಲ್ ಸೇವೆಯನ್ನು ಉನ್ನತೀಕರಿಸಲು ಅವಶ್ಯವಾದ 4G ಉಪಕರಣ ಮತ್ತು ಬ್ಯಾಟರಿ ಸೆಟ್ ಗಳನ್ನು ಕೂಡಲೇ ಅಳವಡಿಸುವಂತೆ ಮತ್ತು ಹೊಸ ಟವರ್ ನ ಕಾರ್ಯ ಜನವರಿ ತಿಂಗಳ ಒಳಗೆ ಮುಗಿಸುವಂತೆ ಸೂಚಿಸಿದರು.
ಸಂಸದರ ಸೂಚನೆಯಂತೆ ಈಗಾಗಲೇ 52 ಹೊಸ ಬ್ಯಾಟರಿ ಸೆಟ್ ಗಳು ಮಂಜುರಾಗಿದ್ದು, ಸದ್ಯದಲ್ಲೇ ಹೊಸ ಬ್ಯಾಟರಿ ಅಳವಡಿಸುವುದಾಗಿ DGM ಎಸ್ ಬಾಲಾಜಿ ಅವರು ಸಭೆಯಲ್ಲಿ ಮಾಹಿತಿ ನೀಡಿದರು.
ಯಾವುದೇ ನೆಟ್ವರ್ಕ್ ಇರದ ಹಳ್ಳಿಗಳಲ್ಲಿ ಈಗಾಗಲೇ 15 ಹೊಸ 4G ಟವರ್ ಕಾರ್ಯರಂಭ ಮಾಡಿದ್ದು ಉಳಿದ 13 ಕಡೆ ಟವರ್ ನ ಕೆಲಸ ನಡೆಯುತ್ತಿದೆ. ಹಾಗೂ 3ಜಿ ಸೇವೆಯಿಂದ 4ಜಿ ಸೇವೆಗೆ ಉನ್ನತೀಕರಣ ಕಾರ್ಯ 153 ಕಡೆ ಮುಗಿದಿದ್ದು ಉಳಿದ 64 ಕಡೆ ಶೀಘ್ರವಾಗಿ ಮುಗಿಸುವಂತೆ ಸೂಚನೆ ನೀಡಿದರು. ಮೇಲಿನ ಕಾರ್ಯಗಳಿಗೆ ಅಗತ್ಯವಾದ ವಿದ್ಯುತ್ ಸಂಪರ್ಕ ಪೂರೈಸುವಂತೆ ಮತ್ತು ದತ್ತಾಪೀಠದಲ್ಲಿರುವ ಟವರ್ ನಲ್ಲಿ ಬಿಎಸ್ಎನ್ಎಲ್ ನ 2G&3ಗೆ ಸೇವೆಯ ಜೊತೆಗೆ ಪೊಲೀಸ್ ಇಲಾಖೆಯ 112 ಸೇವೆಯೂ ಇದ್ದು ಮೆಸ್ಕಾಂನಿಂದ ನಿರಂತರ ವಿದ್ಯುತ್ ಸಂಪರ್ಕದ ಅವಶ್ಯಕತೆ ಇರುವುದರಿಂದ ದತ್ತಾತ್ರೇಯ ಪೀಠದ ಟವರ್ ಗೆ ಮಲ್ಲೇನಹಳ್ಳಿಯ MUSS ನಿಂದ Twisted Overhead Power Cable ಮೂಲಕ ಮೆಸ್ಕಾಂ ಸಂಪರ್ಕವನ್ನು ಶೀಘ್ರದಲ್ಲಿ ನೀಡುವಂತೆ ಮೆಸ್ಕಾಂ ಎಂ. ಡಿ. ಯವರಿಗೆ ಸಂಸದರು ದೂರವಾಣಿ ಮೂಲಕ ಸೂಚಿಸಿದರು.
ರಸ್ತೆ ಕೆಲಸ, ನೀರಿನ ಪೈಪ್ ಕೆಲಸ ಹಾಗೂ ವಿದ್ಯುತ್ ಕಂಬಗಳನ್ನು ಹಾಕುವ ಸಂದರ್ಭದಲ್ಲಿ ಬಿ ಎಸ್ ಎನ್ ಎಲ್ ನ ಕಚೇರಿ ಗೆ ಮಾಹಿತಿ ನೀಡುವುದರ ಮೂಲಕ ಕೇಬಲ್ ಗೆ ಆಗುವ ಹಾನಿಯನ್ನು ತಪ್ಪಿಸಬೇಕು ಮತ್ತು ಮಾಹಿತಿ ನೀಡದೆ ಕೇಬಲ್ ಹಾನಿ ಮಾಡಿದಲ್ಲಿ ಕೂಡಲೇ ಪೋಲಿಸ್ ಇಲಾಖೆಯ ಮೂಲಕ ಎಫ್ ಐ ಆರ್ ದಾಖಲಿಸಬೇಕು ಮತ್ತು ಕೇಬಲ್ ಹಾನಿಯ ಮೊತ್ತವನ್ನು ಸಂಬಂಧಪಟ್ಟವರಿಂದ ವಸೂಲಾತಿ ಮಾಡುವಂತೆ ಬಿ ಎಸ್ ಎನ್ ಎಲ್ ಮತ್ತು ಪೋಲಿಸ್ ಇಲಾಖೆಗೆ ಸೂಚಿಸಿದರು.
ವಿದ್ಯಾಮಿತ್ರ ಯೋಜನೇಯ ಅಡಿಯಲ್ಲಿ ಯಾವುದೇ ಸಂಪರ್ಕ ಇರದ ಹಳ್ಳಿಗಳ ಶಾಲೆಗಳಿಗೆ FTTH ಮೂಲಕ ಇಂಟರ್ನೆಟ್ ಸಂಪರ್ಕ ನೀಡಲು ಸರ್ವೇಕಾರ್ಯ ಮಾಡುವಂತೆ ಸೂಚಿಸಿದರು. ಹಾಗೂ ಮೊಬೈಲ್ ನೆಟ್ವರ್ಕ್ ಇರದ 200 ಕ್ಕೂ ಹೆಚ್ಚಿನ ಪ್ರದೇಶಗಳನ್ನು ಗುರುತಿಸಿ, ಹೊಸ ಟವರ್ ನ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಅತ್ಯಾಧುನಿಕ ತಂತ್ರಜ್ಞಾನವಾದ Satalite ಮೂಲಕ ನೆಟ್ವರ್ಕ್ ಅನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿನ ಕುಗ್ರಾಮಗಳಿಗೂ ವಿಸ್ತರಿಸುವಂತೆ ಮತ್ತು ಉಳಿದ 42 ಟವರ್ ಗಳಿಗೆ ಹೊಸ ಬ್ಯಾಟರಿ ನೀಡುವಂತೆ ಕೇಂದ್ರ ಸರಕಾರದ ಸಂಪರ್ಕ ಸಚಿವರಿಗೆ ಮನವಿ ಮಾಡಲಾಗಿದೆಯೆಂದು ಸಂಸದರು ಸಭೆಯಲ್ಲಿ ಮಾಹಿತಿ ನೀಡಿದರು. ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಕೆ ಎಸ್ ಆರ್ ಟಿ ಸಿ ಬಸ್ನ ನಿಲ್ದಾಣಗಳಿಗೆ, ಮೆಡಿಕಲ್ ಕಾಲೇಜು ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಉಚಿತ ವೈಫೈ(WIFI) ಸಂಪರ್ಕ ನೀಡಲು ಸರ್ವೆ ನೆಡೆಸಿ ಪ್ರಸ್ತಾವನೆ ಸಲ್ಲಿಸುವಂತೆ ಬಿ ಎಸ್ ಎನ್ ಎಲ್ ಗೆ ಸೂಚಿಸಿದರು. ಪ್ರಸಕ್ತ BSNL ನ FTTH ಫ್ರ್ಯಾಂಚ್ಚೈಸೀ ಮೂಲಕ ಪ್ರತಿ ಮನೆಗೆ ಇಂಟರ್ನೆಟ್ ಸಂಪರ್ಕ ನೀಡುತ್ತಿದ್ದು ಸಧ್ಯದಲ್ಲೇ ಇಂಟರ್ನೆಟ್ ಜೊತೆಗೆ ಟಿ ವಿ ಚಾನೆಲ್ ಗಳನ್ನೂ (JIO ಮಾದರಿಯಲ್ಲಿ) ನೀಡುವಂತೆ ನಿರ್ದೇಶನ ನೀಡಿದರು.
ಕೇಂದ್ರ ಸರಕಾರದ ಆದೇಶದಂತೆ ಪ್ರಸ್ತುತ ಡಿ. ಓ ಟಿ ಹೆಸರಿನಲ್ಲಿರುವ ಖಾಲಿ ನೀವೇಶನ ಮತ್ತು ದೂರವಾಣಿ ಕೇಂದ್ರದ ಕಟ್ಟಡಗಳುನ್ನು (ಜಿಲ್ಲೆಯಲ್ಲಿ ಒಟ್ಟು 55 ) ಬಿ ಎಸ್ ಎನ್ ಎಲ್ ನ ಹೆಸರಿಗೆ ದಾಖಲಿಸುವಂತೆ (ಮ್ಯೂಟೇಷನ್)ಕಂದಾಯ ಇಲಾಖೆಗೆ ಮತ್ತು ಗ್ರಾಮ ಪಂಚಾಯತಿಗಳಿಗೆ ದಾಖಲಾತಿ ಸಲ್ಲಿಸಿದ್ದುದ್ದು ಶೀಘ್ರದಲ್ಲಿ ಪ್ರಕ್ರಿಯೆ ಮುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ಬಿ ಎಸ್ ಎನ್ ಎಲ್ ಗೆ ಸೂಚನೆ ನೀಡಿದರು.