LATEST NEWS
ಕೊರಗ ಸಮುದಾಯದ ಮನೆಯೊಂದರ ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸ್ ಲಾಠಿ ಚಾರ್ಜ್ ಆರೋಪ
ಉಡುಪಿ ಡಿಸೆಂಬರ್ 28: ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮಕ್ಕೆ ಅವಧಿ ಮೀರಿ ಡಿಜೆ ಬಳಸಿದ್ದಾರೆ ಎಂದು ಆರೋಪಿಸಿ ಪೊಲೀಸರು ಮನೆಯ ಮಂದಿ ಮೇಲೆ ಲಾಠಿ ಬೀಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೋಟತಟ್ಟು ಗ್ರಾಮಪಂಚಾಯತ್ ನ ಕೊರಗ ಕಾಲನಿಯ ಮನೆಯೊಂದರಲ್ಲಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮದಲ್ಲಿ ರಾತ್ರಿ ಅವಧಿ ಮೀರಿ ಡಿಜೆ ಬಳಸಲಾಗಿದೆ ಎಂದು ಪೊಲೀಸರು ಆರೋಪಿಸಿದ್ದು, ಪೊಲೀಸರು ಮನೆಗೆ ನುಗ್ಗಿ ಕಾರ್ಯಕ್ರಮವನ್ನು ನಿಲ್ಲಿಸಿದ್ದಾರೆ.
ಈ ನಡುವೆ ಪೊಲೀಸರ ಕಾರ್ಯಾಚರಣೆ ಸಂದರ್ಭ ಪೊಲೀಸರು ಮದುಮಗನ ಸಹಿತ ಹಲವರ ಮೇಲೆ ಲಾಠಿ ಬೀಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದು, ಪೊಲೀಸ್ ಠಾಣೆ ಮುಂದೆ ಸೇರಿದ ಸ್ಥಳೀಯರು ಪೊಲೀಸ್ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ.
ಅಲ್ಲದೆ ಪೊಲೀಸರು ಹಲವರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದೊಯ್ದು ಅಂಗಿ ಬಿಚ್ಚಿಸಿ ಹಲ್ಲೆ ನಡೆಸಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ. ಸ್ಥಳಕ್ಕೆ ಸ್ಥಳಕ್ಕೆ ಕೊರಗ ಸಮುದಾಯದ ಮುಖಂಡರ ಭೇಟಿ ನೀಡಿದ್ದಾರೆ.
ಈಗಾಗಲೇ ಈ ಘಟನೆಯನ್ನು ದಲಿತ ಸಂಘರ್ಷ ಸಮಿತಿ ಖಂಡಿಸಿದ್ದು, ಲಾಠಿ ಬೀಸಿದ ಪೊಲೀಸ್ ಸಿಬ್ಬಂದಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದ ಕೋಟಾ ಠಾಣಾಧಿಕಾರಿ ಸಂತೋಷ್ ಅವರನ್ನು ಅಮಾನತು ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಆಗ್ರಹಿಸಿದ್ದಾರೆ. ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸದಿದ್ದರೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.