LATEST NEWS
ಮುಂದುವರೆದ ಕೋಟ – ಖಾದರ್ ನಡುವಿನ ಟ್ವಿಟ್ ವಾರ್

ಮಂಗಳೂರು ಜುಲೈ 29: ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ವರ್ಗಾವಣೆ ನಂತರ ಪ್ರಾರಂಭವಾದ ರಾಜಕೀಯ ಕೆಸರೆರಚಾಟ ಇನ್ನೂ ನಿಂತಿಲ್ಲ. ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಖಾದರ್ ನಡುವಿನ ಟ್ವೀಟರ್ ವಾರ್ ಮುಂದುವರೆದಿದ್ದು, ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಗೆ ಮರು ಹೇಳಿಕೆಯನ್ನು ನೀಡುವ ಮೂಲಕ ಯು ಟಿ ಖಾದರ್ ಕೋಟ ಶ್ರೀನಿವಾಸ ಪೂಜಾರಿಗೆ ತಿರುಗೇಟು ನೀಡಿದ್ದಾರೆ.
ಶ್ರೀನಿವಾಸ ಪೂಜಾರಿಯವರೇ, ನಮ್ಮ ಕಾಲದಲ್ಲಿ ಯಾವ ಐಎಎಸ್ ಅಧಿಕಾರಿಯೂ ಕೆಲಸವೇ ಬೇಡ ಅಂತಾ ರಾಜೀನಾಮೆ ನೀಡಿಲ್ಲ. ನಮ್ಮ ಕಾಲದಲ್ಲಿ ಜಿಲ್ಲಾಧಿಕಾರಿಗಳಿಗೆ ಧಮ್ಕಿ ಹಾಕುವ ಧೈರ್ಯ ದುಷ್ಕರ್ಮಿಗಳು ತೋರಿಲ್ಲ. ಯಾವೊಬ್ಬ ಅಧಿಕಾರಿಯನ್ನೂ ರಾತ್ರೋರಾತ್ರಿ ಎತ್ತಂಗಡಿ ಮಾಡಿಲ್ಲ. ನಿಮ್ಮ ಕಾಲ ಗುಣ, ಬಂದ ಒಂದೇ ವರ್ಷದಲ್ಲಿ ಇಬ್ಬರು ಜಿಲ್ಲಾಧಿಕಾರಿಗಳು ಅಪಮಾನಕ್ಕೀಡಾಗಿ ವಾಪಸ್ ಹೋಗಿದ್ದಾರೆ. ನಮ್ಮ ಕಾಲದಲ್ಲಿ ನಾನೇ ಅಧಿಕಾರ ಚಲಾಯಿಸಿದ್ದೆ. ಈಗ ಕಾಲ ನಿಮ್ಮದಿದ್ದರೂ ಅಧಿಕಾರ ಮಾತ್ರ ಬೇರೆಯವರ ಕೈಯಲ್ಲಿದೆಯಲ್ಲಾ ಎಂದು ಕುಟುಕಿದ್ದಾರೆ.

ಅಲ್ಲದೇ ತಮ್ಮ ಟ್ವೀಟನ್ನು ಕರ್ನಾಟಕ ಮುಖ್ಯಮಂತ್ರಿ, ಗೃಹ ಸಚಿವ ಬೊಮ್ಮಾಯಿ ಮತ್ತು ಕೋಟ ಶ್ರೀನಿವಾಸ ಅವರಿಗೇ ಟ್ಯಾಗ್ ಮಾಡಿದ್ದಾರೆ. ಒಟ್ಟಿನಲ್ಲಿ ಹಾಲಿ, ಮಾಜಿಗಳ ರಾಜಕೀಯ ಕೆಸರಿನ ಎರಚಾಟ ಸದ್ಯ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.