Connect with us

    LATEST NEWS

    ಅಂತರಾಷ್ಟ್ರೀಯ ಮಟ್ಟದ ವೈದ್ಯಕೀಯ ಸೌಲಭ್ಯ ಇರುವ ಮಂಗಳೂರಿನ ಕೊರೊನಾ ಕತೆಗಳು….!!

    ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೊಂಕು ದಿನದಿಂದ ದಿನಕ್ಕೆ ಭಯಾನಕ ರೂಪ ತಳೆಯುತ್ತಿದೆ. ಒಂದೆಡೆ ಏರಿಕೆ ಹಾದಿಯಲ್ಲಿರುವ ಕೊರೊನಾ ಸಂಖ್ಯೆ , ಇನ್ನೊಂದೆಡೆ ಕೊರೊನಾದಿಂದ ಪ್ರತಿದಿನ ಏರುತ್ತಲೇ ಇರುವ ಸಾವಿನ ಸಂಖ್ಯೆ. ಈ ನಡುವೆ ಈಗ ಮತ್ತೊಂದು ಸಮಸ್ಯೆ ಕರಾವಳಿಗರನ್ನು ಕಾಡಲು ಶುರು ಮಾಡಿದ್ದು, ಖಾಸಗಿ ಆಸ್ಪತ್ರೆಗಳು ಕೊರೊನಾ ನಡುವೆ ಹಣ ಮಾಡಲು ಹೊರಟಿರುವುದು ಸದ್ಯ ಜಿಲ್ಲೆಯಲ್ಲಿ ಸುದ್ದಿಯಲ್ಲಿದೆ.
    ಈ ನಡುವೆ ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸಾಮಾಜಿಕ ಜಾಲತಾಣದಲ್ಲಿ ಬರೆದ ಮಂಗಳೂರಿನ ಕೊರೋನ‌ ಕತೆಗಳು ಎನ್ನುವ ಪೋಸ್ಟ್ ಭಾರೀ ವೈರಲ್ ಆಗಿದ್ದು, ಅಂತರಾಷ್ಟ್ರೀಯ ಮಟ್ಟದ ವೈದ್ಯಕೀಯ ಸೌಲಭ್ಯ ಇರುವ ಮಂಗಳೂರಿನ ಇನ್ನೊಂದು ಮುಖ ತೊರಿಸುವಂತಿದೆ.

    ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಮ್ಮ ಫೇಸ್ ಬುಕ್ ನಲ್ಲಿ ಬರೆದಿರುವ ಮಂಗಳೂರಿನ ಕೊರೊನಾ ಕತೆಗಳು ಪೋಸ್ಟ್ ಹೀಗಿದೆ……

    ಮಂಗಳೂರಿನ‌ ಖಾಸಗಿ AJ ಮೆಡಿಕಲ್ ಕಾಲೇಜಿನಲ್ಲಿ‌ ಸತ್ತು 24 ತಾಸು ದಾಟಿದರೂ ಕೊರೋನ ಪರೀಕ್ಷೆಯ ವರದಿ ಬರದೆ ಅಸಹಾಯಕರಾಗಿದ್ದ ಪಡುಬಿದ್ರೆಯ ಸಾಲಿಯಾನ್ ಕುಟುಂಬದ ಕತೆ ನಿನ್ನೆ ಹೇಳಿದ್ದೆ. ಅದು ಇಂದು ಮತ್ತಷ್ಟು ಭಯಾನಕವಾಗಿ ಮುಕ್ತಾಯಗೊಂಡಿದೆ.

    ನಾಡದೋಣಿಯಲ್ಲಿ ಮೀನುಗಾರಿಕೆ ವೃತ್ತಿ ಮಾಡುವ ಪಡುಬಿದ್ರೆಯ 50 ರ ಹರೆಯದ ಬಡವ ಸಾಲಿಯಾನರಿಗೆ ಡೆಂಗ್ಯೂ ಜ್ವರ ಬಾಧಿಸಿತ್ತು. ಬೈಕಂಪಾಡಿಯ ತನ್ನ ಕುಟುಂಬದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಅವರಿಗೆ ಜ್ವರ ನಿಯಂತ್ರಣ ಮೀರಿತ್ತು.‌ ವೆನ್ ಲಾಕ್ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸೆಗೆ ಮಾತ್ರ ಮೀಸಲಿರಿಸಿ, ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಎಂದು ಜಿಲ್ಲಾಡಳಿತ ಪ್ರಕಟನೆ ಹೊರಡಿಸಿದ್ದರಿಂದ, ಸಾಲಿಯಾನ್ ಕುಟುಂಬಸ್ಥರು ಅವರನ್ನು ಕೆ ಎಮ್ ಸಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿ‌ ಹಾಸಿಗೆಗಳು ಭರ್ತಿಯಾಗಿವೆ ಎಂದು ದಾಖಲಿಸಿಕೊಳ್ಳಲು ನಿರಾಕರಿಸಲಾಯಿತು. ಅದಾಗಲೆ ತೀವ್ರ ಅಸ್ವಸ್ಥರಾಗಿ ಪ್ರಜ್ಞಾಶೂನ್ಯರಾಗಿದ್ದ ಸಾಲಿಯಾನರನ್ನು‌ ಮಂಗಳೂರಿನ ಮತ್ತೊಂದು ಖಾಸಗಿ ಮೆಡಿಕಲ್ ಕಾಲೇಜು A J ಗೆ ಕರೆದೊಯ್ಯಲಾಯಿತು.‌ ಅಲ್ಲಿ ದಾಖಲಿಸಿಕೊಳ್ಳುವಷ್ಟರಲ್ಲಿ‌ ಸಾಲಿಯಾನರ ಉಸಿರು ನಿಂತಿತ್ತು. ಏ ಜೆ ಯ ವೈದ್ಯರು ಅದನ್ನು ಅಧಿಕೃತವಾಗಿ ಘೋಷಿಸಿದರಷ್ಟೆ. ಅಲ್ಲಿಂದ ಬಡ ಮೀನುಗಾರ ಕುಟುಂಬದ ಕರುಣಾಜನಕ ಕತೆ ಆರಂಭಗೊಂಡಿತು.

    ಆಸ್ಪತ್ರೆಗೆ ದಾಖಲಿಸುವಾಗಲೆ ಮೃತ ಪಟ್ಟಿದ್ದರೂ, ಮೃತ ದೇಹದ ಕೋವಿಡ್ ಪರೀಕ್ಷೆ ಕಡ್ಡಾಯ ಎಂದು ಮೆಡಿಕಲ್ ಕಾಲೇಜು‌ ಆಡಳಿತ ಸಾಲಿಯಾನರ ಮೃತದೇಹವನ್ನು (ಜುಲೈ 27) ವಶಕ್ಕೆ ಪಡೆದುಕೊಂಡಿತು.‌ ನಂತರ 24 ತಾಸು ವರದಿಯ ಕುರಿತು ಕುಟುಂಬಕ್ಕೆ ಯಾವುದೇ ಮಾಹಿತಿ ನೀಡದೆ ಶವಾಗಾರದ ಬಳಿ ಕಾಯಿಸಲಾಯಿತು.‌ ಆ ಮೇಲೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ನಂತರ ಸಂಜೆ 6 ಗಂಟೆಗೆ ವರದಿ ಕೋವಿಡ್ ಪಾಸಿಟಿವ್ ಎಂದು ಹೇಳಲಾಯಿತು.

    ಕೋವಿಡ್ ವರದಿ ಬಂದ ನಂತರವೂ ಅಂತ್ಯಕ್ರಿಯೆಯ ಕುರಿತು ಸರಿಯಾದ ಮಾಹಿತಿ ದೊರಕದೆ ಸಾಲಿಯಾನ್ ಕುಟುಂಬಸ್ಥರು ರಾತ್ರಿಯವರೆಗೆ ಆಸ್ಪತ್ರೆಯ ಮುಂದೆ ಪರದಾಡಿದರು. ಕೊನೆಗೆ ಬೆಳಿಗ್ಗೆ 8 :30 ಕ್ಕೆ ಅಂತ್ಯಕ್ರಿಯೆ ನಡೆಸುವುದಾಗಿ ಕುಟುಂಬಕ್ಕೆ ತಿಳಿಸಲಾಯಿತು. ಆ ನಡುವೆ ಶವಾಗಾರದ ವೆಚ್ಚ ಎಂದು 2,500 ರೂಪಾಯಿ ಕುಟುಂಬಸ್ಥರಿಂದ ಪಡೆಯಲಾಯಿತು.

    ಇಂದು ಬೆಳಿಗ್ಗೆ 8 :00 ಗಂಟೆಗೆ ಏ ಜೆ ಮೆಡಿಕಲ್ ಆಸ್ಪತ್ರೆಗೆ ಕುಟುಂಬಸ್ಥರು ಬಂದು ತಲುಪಿದರೂ ಅವರಿಗೆ ಸರಿಯಾದ ಮಾಹಿತಿ ನೀಡಲು ಅಲ್ಲಿ ಯಾರೂ ಇರಲಿಲ್ಲ. ಆಸ್ಪತ್ರೆಯವರು ಮೃತದೇಹದ ಪರೀಕ್ಷೆ, ಕೋವಿಡ್ ಪರೀಕ್ಷೆ ಎಂದು ,8, 500 ರೂಪಾಯಿ ಬಿಲ್ ಕೊಟ್ಟು ಪಾವತಿಸುವಂತೆ ತಿಳಿಸಿದರು. ಅಂತ್ಯ ಕ್ರಿಯೆಗೆ ಬೇಕಾದ ಕಿಟ್ ಗಳನ್ನು ಖರೀದಿಸುವಂತೆ ಸೂಚಿಸಿದರು. ತಾಲೂಕು ಆಡಳಿತದ ಪ್ರತಿನಿಧಿಗಳು ಬಂದು ಮೃತ ದೇಹವನ್ನು ಅಂತ್ಯಕ್ರಿಯೆಗೆ ಸಾಗಿಸಲಿದ್ದಾರೆ ಎಂದಷ್ಟೆ ಮಾಹಿತಿ ನೀಡಿದರು. ಕುಟುಂಬದ ಸಂಪರ್ಕಕ್ಕೆ ಜಿಲ್ಲಾಡಳಿತದ ಯಾವ ಪ್ರತಿನಿಧಿಗಳೂ ಲಭ್ಯರಿರಲಿಲ್ಲ.

    ಸಾಲಿಯಾನರ ಬಡ ಕುಟುಂಬದ ಪರವಾಗಿ ಬಂದಿದ್ದವರು ಈ ಕುರಿತು ನಮಗೆ ಮತ್ತೆ ಮಾಹಿತಿ ನೀಡಿ, ಸಹಾಯ ಮಾಡುವಂತೆ ವಿನಂತಿಸಿದರು. ನಾವು ಸತತ ಆರು ಗಂಟೆಗಳ ಕಾಲ ಜಿಲ್ಲಾಡಳಿತದ ಬೆನ್ನು ಹತ್ತಿದೆವು. ಜಿಲ್ಲಾ ಆರೋಗ್ಯ ಅಧಿಕಾರಿಗೆ ಖಾಸಗಿ ಮೆಡಿಕಲ್ ಆಸ್ಪತ್ರೆಗಳಲ್ಲಿ‌ ಮೃತರಾದ ಕೋವಿಡ್ ಸೋಂಕಿತರ ಮೃತದಹೇದ ವಿಲೇವಾರಿ ನಡೆಸುವುದು, ಅದರ ಖರ್ಚುವೆಚ್ಚ, ಕೋವಿಡ್ ಪರೀಕ್ಷೆ, ಮೃತದೇಹವನ್ನು ಪರೀಕ್ಷಿಸಿದ್ದಕ್ಕೆ ಬಿಲ್ ವಿಧಿಸಿರುವ ಕುರಿತು, ಅದನ್ನು ಯಾರು ಭರಿಸಬೇಕು ಎಂಬುದರ ಕುರಿತು ಸರಿಯಾದ ಸ್ಪಷ್ಟತೆ ಇರಲಿಲ್ಲ. ತಹಶೀಲ್ದಾರ್ ರನ್ನು ಸಂಪರ್ಕಿಸುವಂತೆ ಸೂಚಿಸಿದರು.

    “ಮಂಗಳೂರಿನಲ್ಲಿ ನಾಲ್ಕೈದು ಕೋವಿಡ್ ಸಾವುಗಳು ಸಂಭವಿಸಿವೆ, ಕೋವಿಡ್ ಪಾಸಿಟಿವ್ ಮೃತದೇಹಗಳಿಗೆ ಒಂದು ಸ್ಮಶಾನ ಮಾತ್ರ ಮೀಸಲಿಡಲಾಗಿದೆ. ಒಂದು ಮೃತ ದೇಹದ ದಹನಕ್ಕೆ ಮೂರು ತಾಸು ಹಿಡಿಯುವುದರಿಂದ ಒಂದಿಷ್ಟು ತಡವಾಗುತ್ತಿದೆ. ಖರ್ಚು ವೆಚ್ಚವನ್ನು ಜಿಲ್ಲಾಡಳಿತವೇ ಭರಿಸಲಿದೆ” ಎಂದು ತಹಶೀಲ್ದಾರ್ ತಿಳಿಸಿದರು.‌ ಮಧ್ಯಾಹ್ನ ಕಳೆದರೂ ಅಂತ್ಯ ಸಂಸ್ಕಾರದ ಕುರಿತು ಮಾಹಿತಿ ನೀಡಲು ಯಾರೂ ಲಭ್ಯರಾಗದೆ ಮೃತ ಸಾಲಿಯಾನ್ ಕಡೆಯವರು ಆಸ್ಪತ್ರೆಯ ಶವಾಗಾರದ ಮುಂದೆ ಅಕ್ಷರಶ ಗತಿ ಇಲ್ಲದವರಂತೆ ನಿಂತು ಬಿಟ್ಟರು. ಮತ್ತೆ ನಾವು ಅಧಿಕಾರಿಗಳ ಬೆನ್ನು ಹತ್ತಿದ ಮೇಲೆ ಹೆಣ ಕೊಂಡೊಯ್ಯುವ ಓರ್ವ ಆಂಬುಲೆನ್ಸ್ ಚಾಲಕನ ನಂಬರ್ ಮಾತ್ರ ತಹಶೀಲ್ದಾರ್ ಕಡೆಯಿಂದ ದೊರಕಿತು. ಎಲ್ಲಾ ಒದ್ದಾಟದ ನಂತರ ಸಂಜೆ ಆರು ಗಂಟೆಗೆ ಅಂತ್ಯ ಸಂಸ್ಕಾರ ನಡೆಸುವುದಾಗಿ ತಿಳಿಸಲಾಯಿತು.

    ಈ ನಡುವೆ ಖಾಸಗಿ ಮೆಡಿಕಲ್ ಕಾಲೇಜಿನವರು “ಇನ್ನೇನು ಹೆಣ ಕೊಂಡಯ್ಯಲು ಆಂಬುಲೆನ್ಸ್ ಬರುತ್ತದೆ. ಅದರ ಚಾಲಕ ಸಿಬ್ಬಂದಿಗಳಿಗೆ, ಹೆಣ ಸುಡುವವರಿಗೆ ಒಟ್ಟು 6 ಪಿಪಿಇ ಕಿಟ್ ಖರೀದಿಸಬೇಕಿದೆ. ತಲಾ 1,500 ರ ರಂತೆ, ಒಟ್ಟು 9 ಸಾವಿರ ರೂಪಾಯಿ ಪಾವತಿಸಿ” ಎಂದು ಆದೇಶಿಸಿಸಿದರು.‌ ಈ ಕುರಿತು ನಾನು ತಹಶೀಲ್ದಾರರ ಗಮನ ಸೆಳೆದಾಗ “ಇದೇನು ಹೊಸ ಕತೆ, ಮೆಡಿಕಲ್ ಕಾಲೇಜಿನವರು ಉಚಿತವಾಗಿ ಪಿಪಿಇ ಕಿಟ್ ಒದಗಿದಬೇಕಲ್ಲಾ!” ಎಂದು ಮಾತು ತೇಳಿಸಿದರೆ ಹೊರತು ಸಮಸ್ಯೆ ಬಗೆ ಹರಿಸಲಿಲ್ಲ.

    ಇದು ದಕ್ಷಿಣ ಕ‌ನ್ನಡ ಜಿಲ್ಲೆಯ ಬಡವರ, ಜನಸಾಮಾನ್ಯರ ಕೊರೋನಾ ಕಾಲದ ಕತೆ‌. ಜಿಲ್ಲಾಡಳಿತದ ಉಚಿತ ಚಿಕಿತ್ಸೆಯ ಮಾತು ನಂಬಿ ಸಾಲಿಯಾನರನ್ನು ಬದುಕಿಸಲು ಖಾಸಗಿ ಮೆಡಿಕಲ್ ಕಾಲೇಜಿಗೆ ಕರೆದೊಯ್ದ ತಪ್ಪಿಗೆ, ಯಾವ ಚಿಕಿತ್ಸೆಯ ಅಗತ್ಯವೂ ಇಲ್ಲದ ಮೃತ ದೇಹಕ್ಕೆ ಸುಮಾರು 20 ಸಾವಿರ ರೂಪಾಯಿಗೂ ಹೆಚ್ಚು ಹಣವನ್ನು ಕಳೆದುಕೊಳ್ಳಬೇಕಾಯ್ತು. (ಬಡ ಮೀನುಗಾರ ಕುಟುಂಬಕ್ಕೆ ಇದು ದೊಡ್ಡ ಮೊತ್ತ) ಅದಕ್ಕಿಂತ ಹೆಚ್ಚಾಗಿ ಸಾವಿನ ನೋವಿನ ಜೊತೆಗೆ 48 ಗಂಟೆಗಳ ಕಾಲ ಘೋರ ನರಕಯಾತನೆ ಅನುಭವಿಸಬೆಕಾಯ್ತು.

    ದಕ್ಷಿಣ ಕ‌ನ್ನಡ ಜಿಲ್ಲಾಡಳಿತಕ್ಕೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತೆರಳಿದ ಬಡವರಿಗೆ ಉಚಿತ ಚಿಕಿತ್ಸೆಕೊಡಲಾಗದಿದ್ದರೂ, ಉಚಿತ ಅಂತ್ಯಕ್ರಿಯೆ ನಡೆಸಲಾಗುವುದಿಲ್ಲ ಎಂಬುದು ನಾಚಿಕೆಗೇಡು. ಅದೂ ಅಲ್ಲದೆ ಐನೂರು, ಆರು ನೂರು ರೂಪಾಯಿ ಬಾಳುವ ಪಿಪಿಇ ಕಿಟ್ ಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳು 1,500 ರೂಪಾಯಿಯಂತೆ ಮಾರಾಟ ಮಾಡುವುದು, ಮೃತ ಪಟ್ಟವರ ಕಡೆಯವರಿಗೆ ಕಡ್ಡಾಯವಾಗಿ ಆರೇಳು ಕಿಟ್ ಖರೀದಿಸುವಂತೆ ಮಾಡುವುದು ಸಾವಿನ‌ ಮನೆಯಲ್ಲಿ ಗಳ ಹಿರಿದಂತೆ. ಈ ರೀತಿ ಉಣ್ಣಲು ಕೂತ ಜಿಲ್ಲಾಡಳಿತ, ಜನಪ್ರತಿನಿಧಿಗಳು, ಖಾಸಗಿ ಆಸ್ಪತ್ರೆಯ ಆಡಳಿತಗಳು ಮೃತ ಸಾಲಿಯಾನರ ಬಡ, ಅನಾಥ ಹೆಂಡತಿ ಮಕ್ಕಳ ಮುಖವನ್ನೊಮ್ಮೆ ನೋಡಿ ಬರಲಿ. ಆ ಮೇಲೆ ಕನ್ಬಡಿಯಲ್ಲಿ ತಮ್ಮದೇ ಮುಖಗಳನ್ನೊಮ್ಮೆ ನೋಡಿಕೊಳ್ಳಲಿ.

    ಮುನೀರ್ ಕಾಟಿಪಳ್ಳ

    Share Information
    Advertisement
    Click to comment

    You must be logged in to post a comment Login

    Leave a Reply