UDUPI
ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಕೊಡುಗೆ ಅಪಾರ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ
ಉಡುಪಿ, ಅಕ್ಟೋಬರ್ 25 : ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಕೊಡುಗೆ ಅಪಾರ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ವತಿಯಿಂದ ನಡೆದ ಶ್ರೀ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಚೆನ್ನಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮಾತನಾಡಿದರು.
ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದಿದ್ದು, ಚೆನ್ನಮ್ಮರ ಹೋರಾಟದ ಮನೋಭಾವವು ಇಂದಿನ ಮಹಿಳೆಯರಿಗೆ ಮಾದರಿಯಾಗಿದೆ. ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದರೊಂದಿಗೆ ಚೆನ್ನಮ್ಮರ ಶೌರ್ಯ ಸಾಹಸ, ಸಾಧನೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದರು. 1857 ರ ಸ್ವಾತಂತ್ರ್ಯ ಸಂಗ್ರಾಮ/ ಸಿಪಾಯಿ ದಂಗೆಯ ಪೂರ್ವದಲ್ಲಿ ತನ್ನ ಕುಟುಂಬವನ್ನು ಕಳೆದುಕೊಂಡ ಸಂದರ್ಭದಲ್ಲಿಯೂ ಎದೆಗುಂದದೇ ರಾಜ್ಯದ ರಕ್ಷಣೆಗೆ ಪಣತೊಟ್ಟು ಬ್ರಿಟಿಷರ ವಿರುದ್ಧ ಹೋರಾಡಿ, ಬಂಧಿಸಲ್ಪಟ್ಟು ಬೈಲಹೊಂಗಲದ ಸೆರೆಮನೆಯಲಿದ್ದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಆಕೆಯ ಧೈರ್ಯ ಇಂದಿಗೂ ಅವಿಸ್ಮರಣೀಯ ಎಂದರು.