LATEST NEWS
ಅಪ್ರಾಪ್ತ ಮಗುವನ್ನು ಕಿಡ್ನಾಪ್ ಮಾಡಿದ ಆರೋಪಿಯನ್ನು 2 ಗಂಟೆಯೊಳಗೆ ಅರೆಸ್ಟ್ ಮಾಡಿದ ಪೊಲೀಸರು
ಮಂಗಳೂರು ಸೆಪ್ಟೆಂಬರ್ 01: ಎರಡೂವರೆ ವರ್ಷದ ಮಗುವಿನ ಅಪಹರಣ ಮಾಡಿದ್ದ ಆರೋಪಿಯನ್ನು ಪ್ರಕರಣ ದಾಖಲಾದ ಎರಡು ಗಂಟೆಯೊಳಗೆ ಪೊಲೀಸರು ಅರೆಸ್ಟ್ ಮಗುವನ್ನು ರಕ್ಷಣೆ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ಅಳಪೆ ಪಡೀಲ್ ನಲ್ಲಿರುವ ಅರಣ್ಯ ಇಲಾಖೆಯ ಸಸ್ಯವನ ಬಳಿ ಅಗಸ್ಟ್ 31 ರಂದು ಸಂಜೆ ವೇಳೆಗೆ ಎರಡುವರೆ ವರ್ಷದ ಮಗುವನ್ನು ಅಪಹರಣ ಮಾಡಲಾಗಿದೆ ಎಂದು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿ ಆರೋಪಿ ಮಗುವಿನೊಂದಿಗೆ ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿರುವುದಾಗಿ ಮಾಹಿತಿ ಸಿಕ್ಕಿತ್ತು. ಕಾಸರಗೋಡು ಪೊಲೀಸರ ಸಹಾಯದೊಂದಿಗೆ ಅಂತರಾರಾಜ್ಯ ಆರೋಪಿಯನ್ನು ಅರೆಸ್ಟ್ ಮಾಡಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಕೇರಳದ ಅನೀಶ್ ಕುಮಾರ್ ಎಂದು ಗುರುತಿಸಲಾಗಿದೆ.
ಘಟನೆ ವಿವರ
ಆರೋಪಿ ಅನೀಶ್ ಕುಮಾರ್ ತನ್ನ ಊರಿನಿಂದ ದಿನಾಂಕ: 28-08-2024 ರಂದು ಮನೆಯಲ್ಲಿ ಗಲಾಟೆ ಮಾಡಿಕೊಂಡು ಮುಂಬೈಗೆ ರೈಲಿನಲ್ಲಿ ಹೋಗಿದ್ದು, ಗೋವಾದಲ್ಲಿ ರೈಲಿನಿಂದ ಇಳಿದು ಈತನು ಮುಂಬೈ ರೈಲನ್ನು ತಪ್ಪಿಸಿಕೊಂಡಿದ್ದಾನೆ. ಬಳಿಕ 31-08-2024 ರಂದು ಗೋವಾದಿಂದ ಹೊರಟು ಮಂಗಳೂರಿಗೆ ಬಂದು, ಪಡೀಲ್ ಅಳಪೆಯ ಅರಣ್ಯ ಭವನದ ಮುಂಭಾಗದಲ್ಲಿ ಒಂದು ಹೆಣ್ಣು ಮಗು ನಡೆದುಕೊಂಡು ಹೋಗುತ್ತಿದ್ದನ್ನು ನೋಡಿ, ತನಗೆ ಹೆಣ್ಣು ಮಕ್ಕಳಿಲ್ಲವೆಂದು ಆಸೆಯಿಂದ ಈ ಹೆಣ್ಣು ಮಗುವನ್ನು ಕರೆದುಕೊಂಡು ಹೋಗಿದ್ದಾನೆ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಆರೋಪಿ ಬಳಿಕ ಮಂಗಳೂರು ಜಂಕ್ಷನ್ ನ ರೈಲು ನಿಲ್ದಾಣದಿಂದ ಕಾಸರಗೋಡು ಕಡೆಗೆ ಹೋಗುವ ರೈಲಿನಲ್ಲಿ ಹೋಗಿದ್ದಾನೆ. ಈ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು, ಕಾಸರಗೋಡಿನ ರೈಲ್ವೇ ಪೊಲೀಸರಿಗೆ ಮಾಹಿತಿಯನ್ನು ನೀಡಿ, ತಕ್ಷಣ ಕಾರ್ಯ ಪ್ರವೃತ್ತರಾಗಿ ಕಂಕನಾಡಿ ನಗರ ಪೊಲೀಸ್ ಠಾಣೆ ಠಾಣಾಧಿಕಾರಿಗಳ ಮಾರ್ಗದರ್ಶನದಂತೆ ಪಿ.ಎಸ್.ಐ ಶಿವಕುಮಾರ.ಕೆ ಮತ್ತು ತಂಡವು ಕಾಸರಗೋಡಿಗೆ ತೆರಳಿ ಕಾಸರಗೋಡಿನ ರೈಲ್ವೇ ಪೊಲೀಸರ ಸಹಾಯದೊಂದಿಗೆ ಆರೋಪಿತನನ್ನು ಹಾಗೂ ಮಗುವನ್ನು ವಶಕ್ಕೆ ಪಡೆದುಕೊಂಡು ಮಗುವಿನ ತಂದೆ ತಾಯಿಯವರಿಗೆ ನೀಡಿದ್ದಾರೆ. ಸದ್ಯ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
You must be logged in to post a comment Login