KARNATAKA
ಶಿವಮೊಗ್ಗದಲ್ಲಿ ಮತ್ತೆ ಸದ್ದಿಲ್ಲದೆ ತಲೆ ಎತ್ತಿದ ಕೆಎಫ್‌ಡಿ : ಒರ್ವ ಯುವತಿ ಬಲಿ..!
ಶಿವಮೊಗ್ಗ : ಮಲೆನಾಡು ಪ್ರದೇಶ ಶಿವಮೊಗ್ಗದಲ್ಲಿ ತಣ್ಣಗೆ ಇದ್ದ ಕೆ ಎಫ್‌ಡಿ ಮತ್ತೆ ತಲೆ ಎತ್ತಿದ್ದು, ಇದರ ಅಟ್ಟಹಾಸಕ್ಕೆ ಯವತಿ ಬಲಿಯಾಗಿದ್ದಾಳೆ.
ಜಿಲ್ಲೆಯಲ್ಲಿ ಇದುವರೆಗೆ ಎರಡು ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಒಬ್ಬ ಯುವತಿ ಸಾವನ್ನಪ್ಪಿದ್ದಾಳೆ. ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಈ ವರ್ಷದ ಮೊದಲ ಬಲಿ ಇದಾಗಿದೆ. 2020ರ ನಂತರ ಇದು ಮೊದಲನೇ ಸಾವಾಗಿದ್ದು, ಸ್ಥಳೀಯರ ಭೀತಿಗೆ ಕಾರಣವಾಗಿದೆ.ಹೊಸನಗರ ತಾಲೂಕಿನ ಅರಮನೆಕೊಪ್ಪ ವ್ಯಾಪ್ತಿಯ ಗ್ರಾಮದಲ್ಲಿ ಪ್ರಕರಣ ಪತ್ತೆಯಾಗಿದ್ದು, ಇದು 2014ರ ನಂತರ ಇಲ್ಲಿ ಕೆ.ಎಫ್.ಡಿ ಪತ್ತೆಯಾಗಿರಲಿಲ್ಲ. ಸುತ್ತಮುತ್ತ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. 2023-24ನೇ ಸಾಲಿನಲ್ಲಿ ತೀರ್ಥಹಳ್ಳಿಯಲ್ಲಿ ಒಂದು ಹಾಗೂ ಹೊಸನಗರದಲ್ಲಿ ಒಂದು ಒಟ್ಟು ಎರಡು ಪ್ರಕರಣಗಳು ಪತ್ತೆಯಾಗಿವೆ. ಕಳೆದ ವರ್ಷ ಮಂಗನ ಕಾಯಿಲೆಗೆ ತುತ್ತಾಗಿದ್ದವರು ಸ್ವಸ್ಥರಾಗಿದ್ದರು. ಜಿಲ್ಲೆಯಲ್ಲಿ 26-27 ಮಂಗಗಳ ಸಾವಾಗಿತ್ತು. ಅದರಲ್ಲಿ ತೀರ್ಥಹಳ್ಳಿಯಲ್ಲಿ ಒಂದು ಮಂಗದಲ್ಲಿ ಕೆಎಫ್.ಡಿ ವೈರಾಣುಗಳು ಪತ್ತೆಯಾಗಿದ್ದವು.
ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಮದಲ್ಲಿ ಮಂಗನ ಕಾಯಿಲೆಯಿಂದ ಮೃತಪಟ್ಟ ಯುವತಿಯ ಮನೆಗೆ ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಸಾಂತ್ವನ ಹೇಳಿದರು.ಅರಮನೆಕೊಪ್ಪ ಗ್ರಾಮದ ಬಪ್ಪನಮನೆಯ ಅನನ್ಯ(18) ಎಂಬ ಯುವತಿ ಮಂಗನ ಖಾಯಿಲೆಯಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.ಈ ಹಿನ್ನಲೆಯಲ್ಲಿ ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಈಕೆ ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ನಗರ, ಹೊಸನಗರ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಜ್ವರ ಉಲ್ಬಣಗೊಂಡಿದ್ದರಿಂದ ಕೆಎಫ್‌ಡಿ ಟೆಸ್ಟ್ ಮಾಡಲಾಗಿತ್ತು. ಮೊದಲ ಟೆಸ್ಟ್‌ನಲ್ಲಿ ನೆಗೆಟಿವ್, ಎರಡನೇ ಬಾರಿ ಆರ್‌ಟಿಸಿಪಿಆರ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿತ್ತು.ಮೂರು ದಿನಗಳ ಕಾಲ ಮೆಗ್ಗಾನ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದು ಶುಕ್ರವಾರ ಸಂಜೆ ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಬಹು ಅಂಗಾಂಶಗಳ ವೈಫಲ್ಯದಿಂದ ಚಿಕಿತ್ಸೆ ಫಲಿಸದೆ ಸೋಮವಾರ ಬೆಳಿಗ್ಗೆ ಅನನ್ಯ ಮೃತಪಟ್ಟಿದ್ದಳು.
ಮಂಗನ ಕಾಯಿಲೆ ಲಸಿಕೆ ಸಂಶೋಧನೆಗೆ ಆರ್ಥಿಕ ನೆರವು; ಸಚಿವ ದಿನೇಶ್ ಗುಂಡೂರಾವ್
ಮಂಗನ ಕಾಯಿಲೆಗೆ ಲಸಿಕೆ ಕಂಡು ಹಿಡಿಯಲು ಸಂಶೋಧನಾ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಳೆದ ತಿಂಗಳು ವಿಧಾನಪರಿಷತ್‌ನಲ್ಲಿ ತಿಳಿಸಿದ್ದರು.
ಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ಡಿ.ಎಸ್ ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಷ್ಟು ದಿನ ಕೆಎಫ್‌ಡಿ ರೋಗಕ್ಕೆ ಲಸಿಕೆಯೊಂದನ್ನು ಬಳಸಲಾಗುತ್ತಿತ್ತು. ಆ ಲಸಿಕೆಯಿಂದ ಯಾವುದೇ ರೀತಿಯ ಪ್ರಯೋಜನ ಇಲ್ಲ ಎಂದು ನಿಲ್ಲಿಸಲಾಗಿದೆ. ಮಂಗನ ಕಾಯಿಲೆ ನಿಯಂತ್ರಿಸುವ ಶಕ್ತಿ ಆ ಲಸಿಕೆಯಲ್ಲಿ ಇಲ್ಲ ಎಂಬ ವರದಿ ಹಿನ್ನೆಲೆಯಲ್ಲಿ ಅದನ್ನು ನೀಡಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು.