LATEST NEWS
ಕರಾವಳಿಯಲ್ಲಿ ಸಿಎಂ ಯಡಿಯೂರಪ್ಪ ವಿರುದ್ದ ಪ್ರಾರಂಭವಾದ ಕೇಸರಿ ಚಾಲೆಂಜ್
ಕರಾವಳಿಯಲ್ಲಿ ಸಿಎಂ ಯಡಿಯೂರಪ್ಪ ವಿರುದ್ದ ಪ್ರಾರಂಭವಾದ ಕೇಸರಿ ಚಾಲೆಂಜ್
ಉಡುಪಿ: ತಬ್ಲಿಘಿ ವಿಚಾರದಲ್ಲಿ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದು ಮುಕ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಗಳ ವಿರುದ್ದ ಈಗ ಹಿಂದೂ ಸಂಘಟನೆಗಳು ತಿರುಗಿ ಬಿದ್ದಿದ್ದು, ಬಿಜೆಪಿ ಭದ್ರಕೋಟೆ ಕರಾವಳಿಯಲ್ಲಿ ಈಗ ಕೇಸರಿ ಚಾಲೆಂಜ್ ಆರಂಭಗೊಂಡಿದೆ.
ತಬ್ಲಿಘಿ ವಿಚಾರ ಇಟ್ಟುಕೊಂಡು ಮುಸಲ್ಮಾನರ ವಿರುದ್ಧ ಮಾತಾಡಬೇಡಿ ಎಂದು ಸಿಎಂ ಯಡಿಯೂರಪ್ಪ ತಾಕೀತು ಮಾಡಿದ್ದರು. ಆದರೆ ಸಿಎಂ ಮಾತಿಗೆ ಕ್ಯಾರೆ ಅನ್ನದ ಬಿಜೆಪಿ ಶಾಸಕ ಸಂಸದರು ತಬ್ಲಿಘಿ ವಿಚಾರಕ್ಕೆ ಈಗಾಗಲೇ ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದಾರೆ.
ಈ ನಡುವೆ ಬಿಜೆಪಿಯ ಭದ್ರಕೋಟೆ ಕರಾವಳಿಯಲ್ಲಿ ಸಿಎಂ ಮಾತಿಗೆ ಭಾರಿ ವಿರೋಧ ವ್ಯಕ್ತವಾಗಿದ್ದು ಸಿಎಂ ಹೇಳಿಕೆಯಿಂದ ಹಿಂದೂ ಪರ ಸಂಘಟನೆಗಳು ಕೆರಳಿವೆ. ತಮ್ಮ ಸ್ಟೇಟಸ್, ಡಿಪಿ ಪಿಕ್ಚರ್‌ನಲ್ಲಿ ಕೇಸರಿ ಧ್ವಜ ಹಾಕುವಂತೆ ಈಗಾಗಲೇ ಕರೆ ನೀಡಲಾಗಿದೆ.
ಈಗಾಗಲೇ ಲಕ್ಷಾಂತರ ಮಂದಿ ಚಾಲೆಂಜ್ ಸ್ವೀಕರಿಸಿದ್ದು, ಕೇಸರಿ ಧ್ವಜವನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ. ಫೇಸ್‍ಬುಕ್, ವಾಟ್ಸಾಪ್‍ನಲ್ಲಿ ಕೇಸರಿ ಧ್ವಜ ಓಡಾಡುತ್ತಿದೆ. ಉಡುಪಿ ಜಿಲ್ಲೆಯ ಕಾರ್ಕಳ ಶಾಸಕ ಸುನೀಲ್ ಕುಮಾರ್, ತಾನು ತಬ್ಲಿ ವಿರುದ್ಧ ಹೋರಾಟದಲ್ಲಿ ಭಾಗವಹಿಸುತ್ತೇನೆ. ಈ ವಿರುದ್ಧದ ಹೋರಾಟದಲ್ಲಿ ಯಾರೆಲ್ಲ ಬೆಂಬಲಿಸುತ್ತಾರೆ ಅವರ ಬೆನ್ನಿಗೆ ನಾನು ನಿಲ್ಲುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಉಡುಪಿಯ ಬಿಜೆಪಿ ಮುಖಂಡ ಮೊಗವೀರ ನಾಯಕ ಯಶ್ಪಾಲ್ ಸುವರ್ಣ ಇದೇ ಹೇಳಿಕೆಯನ್ನು ಕೊಟ್ಟಿದ್ದಾರೆ. ತಬ್ಲಿಘಿ ವಿಚಾರದಲ್ಲಿ ಮೃದು ಧೋರಣೆ ಇಲ್ಲ. ತಪ್ಪಿತಸ್ಥರ ವಿರುದ್ಧ ಮಾತನಾಡುವುದು ನಮ್ಮ ಹಕ್ಕಾಗಿದೆ. ಹಿಂದೆಯೂ ಮಾತಾಡಿದ್ದೇವೆ ಮುಂದೆಯೂ ಮಾತಾಡುತ್ತೇವೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿಯಿಂದ ಕೇಸರಿ ಅಭಿಯಾನ ಆರಂಭವಾಗಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಕೇಸರಿ ಧ್ವಜದ ಸಮರ ಸಾರಿದೆ.