LATEST NEWS
ಬೆಟ್ಟದಿಂದ ಜಾರಿ 45 ಗಂಟೆಗಳ ಕಾಲ ಬಂಡೆ ಮಧ್ಯೆ ಸಿಲುಕಿದ್ದ ಚಾರಣಿಗ ರಕ್ಷಣೆ ಮಾಡಿದ ಭಾರತೀಯ ಸೇನೆ

ತಿರುವನಂತಪುರಂ: ಟ್ರೆಕ್ಕಿಂಗ್ ಹೋಗಿದ್ದ ಯುವಕನೊಬ್ಬ ಕಾಲು ಜಾರಿ ಬಿದ್ದು ಬಂಡೆಯೊಂದರಲ್ಲಿ ಸುಮಾರು 45 ಗಂಟೆಗಳ ಕಾಲ ಅನ್ನ ನೀರು ಇಲ್ಲದೆ ಸಿಲುಕಿ ಹಾಕಿಕೊಂಡ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕುರುಂಬಾಚಿ ಬೆಟ್ಟದಲ್ಲಿ ನಡೆದಿದ್ದು, ಭಾರತೀಯ ಸೇನೆ ಹಾಗೂ ಎನ್ ಡಿಆರ್ ಎಫ್ ಜಂಟಿ ಕಾರ್ಯಾಚರಣೆಯಲ್ಲಿ ಯುವಕನ ರಕ್ಷಣೆ ಮಾಡಲಾಗಿದೆ.
23 ವರ್ಷದ ಬಾಬು ತನ್ನಿಬ್ಬರು ಸ್ನೇಹಿತರ ಜೊತೆಗೂಡಿ ಸೋಮವಾರ ಪಾಲಕ್ಕಾಡ್ ಸಮೀಪದ ಕುರುಂಬಚ್ಚಿ ಬೆಟ್ಟ ಏರಲು ತೆರಳಿದ್ದ. ಉಳಿದಿಬ್ಬರು ಮಾರ್ಗಮಧ್ಯದಲ್ಲೇ ಇದು ತಮ್ಮ ಕೈಲಾಗದು ಎಂದು ಸುಮ್ಮನಾಗಿದ್ದರು. ಆದರೆ ಬಾಬು ಬೆಟ್ಟದ ತುದಿ ಏರಿದ್ದ. ಅಲ್ಲಿಂದ ಇನ್ನೇನು ಕೆಳಗೆ ಇಳಿಯಬೇಕು ಎನ್ನುವಷ್ಟರಲ್ಲಿ ಕಡಿದಾದ ಬೆಟ್ಟದ ತುದಿಯಿಂದ ಕಾಲು ಜಾರಿ ಕೆಳಕ್ಕೆ ಉರುಳಿದ್ದ.

ಅದೃಷ್ಟವಶಾತ್ ಆತಪೂರ್ಣ ಕೆಳಕ್ಕೆ ಉರುಳುವ ಬದಲು ನಡುವೆ ಸಣ್ಣದಾದ ಜಾಗವೊಂದಲ್ಲಿ ಸಿಕ್ಕಿಹಾಕಿಕೊಂಡಿದ್ದ. ಆತನ ಮೇಲೆ ಹತ್ತಿ ಬರುವಂತೆಯೂ ಇರಲಿಲ್ಲ. ಹೀಗಾಗಿ ಕೆಳಗೆ ಬಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಯತ್ನ ಮಾಡಿದರು ಯುವಕನ ಸಮೀಪ ತೆರಳಲು ಸಾಧ್ಯವಾಗಲಿಲ್ಲ. ಹೀಗಾಗಿ ಸೋಮವಾರ ಕಾರ್ಯಾಚರಣೆ ಸ್ಥಗಿತ ಗೊಳಿಸಲಾಗಿತ್ತು.
ಸೋಮವಾರ ಬೆಳಗ್ಗಿಯಿಂದಲೂ ಯುವಕ ತಾನು ಕೂರಬಹುದಾದಷ್ಟೇ ಸಣ್ಣ ಜಾಗದಲ್ಲಿ ಸುಡು ಬಿಸಿಲು, ರಾತ್ರಿ ಚಳಿಯ ನಡುವೆ ಅನ್ನ, ನೀರು ಇಲ್ಲದೇ ಕುಳಿತಿದ್ದನು. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಯುವಕನ ರಕ್ಷಣೆಗಾಗಿ ಸೇನೆಯ ನೆರವನ್ನು ಕೋರಿತ್ತು.
ಮೂರು ಸೇನಾ ಘಟಕಗಳು, ವಾಯುಪಡೆಯ ಸಿಬ್ಬಂದಿ ಮತ್ತು 20 ಅಧಿಕಾರಿಗಳು ಸೇರಿದಂತೆ ಎಪ್ಪತ್ತೈದು ಜನರ ತಂಡ. ಕರ್ನಲ್ ಶೇಖರ್ ಅತ್ರಿ ನೇತೃತ್ವದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ಸುಮಾರು 45 ಗಂಟೆಗಳ ನಂತರ, ಸೇನಾ ಅಧಿಕಾರಿಗಳು ಅಂತಿಮವಾಗಿ ಫೆಬ್ರವರಿ 9, ಬುಧವಾರದಂದು ಆತನನ್ನು ಏರ್‌ಲಿಫ್ಟ್ ಮಾಡಿ ರಕ್ಷಿಸುವಲ್ಲಿ ಯಶಸ್ವಿಯಾದರು.