DAKSHINA KANNADA
ಕೇರಳ ಕಣ್ಣೂರಿನ ಕೆರೆಯಲ್ಲಿ ಮುಳುಗಿ ಸುಳ್ಯದ ದಂತವೈದ್ಯಕೀಯ ವಿಧ್ಯಾರ್ಥಿ ಸಾವು

ಸುಳ್ಯ ಜುಲೈ 21: ತನ್ನ ಸ್ನೇಹಿತನ ಮನೆಗೆ ತೆರಳಿದ್ದ ದಂತ ವೈದ್ಯಕೀಯ ವಿಧ್ಯಾರ್ಥಿ ಕೆರೆಯಲ್ಲಿ ಮುಳುಗಿ ಸಾವನಪ್ಪಿದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಮೃತರನ್ನು ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಬಾಳಿಕಲ ನಿವಾಸಿ, ಸುಳ್ಯದ ನಿವೃತ್ತ ತಾಲೂಕು ಆರೋಗ್ಯಾಧಿಕಾರಿ ಡಾ.ನಂದ ಕುಮಾರ್ ಅವರ ಪುತ್ರ, ಮಂಗಳೂರಿನ ಖಾಸಗಿ ಡೆಂಟಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ದಂತ ವಿಜ್ಞಾನ ಕಲಿಯುತ್ತಿದ್ದ ಆಸ್ತಿಕ್ ರಾಘವ್ (19) ಎಂದು ಗುರುತಿಸಲಾಗಿದೆ.

ಆಸ್ತಿಕ್ ರಾಘವ್ ಮಂಗಳೂರಿನಿಂದ ತನ್ನ ಸಹಪಾಠಿಯೊಂದಿಗೆ ಕೇರಳದ ಕಣ್ಣೂರಿನ ಸಹಪಾಠಿ ಮನೆಗೆ ರವಿವಾರ ಬೆಳಿಗ್ಗೆ ಹೋಗಿದ್ದು, ಬಳಿಕ ಅವರು ಮನೆ ಪಕ್ಕದ ಕೆರೆಗೆ ಸ್ನಾನಕ್ಕೆ ಹೋದಾಗ ಆಸ್ತಿಕ್ ಕಾಲು ಜಾರಿ ನೀರಿಗೆ ಬಿದ್ದು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಘಟನೆ ಮಾಹಿತಿ ತಿಳಿದ ಮನೆಯವರು ಕೇರಳದ ಕಣ್ಣೂರಿನ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿ ಪ್ರಕ್ರಿಯೆಗಳು ನಡೆದು, ಮೃತದೇಹವನ್ನು ಹುಟ್ಟೂರಿಗೆ ತರಲಾಗುತ್ತದೆ ಎಂದು ತಿಳಿದುಬಂದಿದೆ.