National
ಕೊರೊನಾ ಹಿನ್ನಲೆ ಸದ್ಯ ಶಬರಿಮಲೆ ಅಯ್ಯಪ್ಪನ ದರ್ಶನ ಇಲ್ಲ…!!
ಮಾಸಿಕ ಪೂಜೆ ಜೂನ್ 14ರಿಂದ ಅಯ್ಯಪ್ಪನ ದರ್ಶನ ಇಲ್ಲ ತಿರುವಾಂಕೂರು ದೇವಸ್ವಂ ಮಂಡಳಿ ಸ್ಪಷ್ಟನೆ
ಕೇರಳ ಜೂನ್ 11: ತಿಂಗಳ ಪೂಜೆ ಪ್ರಾರಂಭವಾಗಲು ಇನ್ನು ಕೆಲವೇ ದಿನಗಳಿರುವಾಗ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ಸದ್ಯ ತೆರೆಯದಿರಲು ದೇವಸ್ವಂ ಮಂಡಳಿ ನಿರ್ಧರಿಸಿದೆ. ಇಂದು ನಡೆದ ಮಹತ್ವದ ಸಭೆ ಬಳಿಕ ಈ ನಿರ್ಧಾರವನ್ನು ಕೇರಳದ ದೇವಸ್ವಂ ಖಾತೆ ಸಚಿವ ಕಡಕಂಪಲ್ಲಿ ಸುರೇಂದ್ರನ್ ಪ್ರಕಟಿಸಿದ್ದಾರೆ.
ಭಾರತ್ ಅನಲಾಕ್ ಬಳಿಕ ದೇಶದಲ್ಲಿ ಮಾರ್ಗಸೂಚಿಗಳ ಅನ್ವಯ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಈ ಹಿನ್ನಲೆ ದೇಶದಲ್ಲಿ ಬಹುತೇಕ ಕಡೆ ದೇವಸ್ಥಾನಗಳು ಬಾಗಿಲು ತೆಗೆದಿದ್ದು, ದೇವರ ದರ್ಶನಕ್ಕೆ ಅವಕಾಶ ನೀಡಿದೆ.
ಇದೇ ರೀತಿ ಪ್ರಸಿದ್ದ ಶಬರಿಮಲೆ ದರ್ಶನಕ್ಕೂ ಅವಕಾಶ ಸಿಗಬಹುದೆಂಬ ಭಕ್ತರ ಆಸೆಗೆ ಈಗ ತಣ್ಣೀರು ಬಿದ್ದಿದೆ. ಜೂನ್ 14ರಿಂದ ಮಾಸಿಕ ಪೂಜೆ ಆರಂಭವಾಗಬೇಕಿದ್ದ ಹಿನ್ನಲೆ ದೇವಸ್ಥಾನ ತೆರೆಯುವ ಸಂಬಂಧ ತಿರುವಾಂಕೂರು ದೇವಸ್ವಂ ಮಂಡಳಿ ಇಂದು ಸಭೆ ನಡೆಸಿತು. ಈ ಸಭೆಯಲ್ಲಿ ಕೇರಳದ ದೇವಸ್ವಂ ಖಾತೆ ಸಚಿವ ಕಡಕಂಪಲ್ಲಿ ಸುರೇಂದ್ರನ್ ಸೇರಿದಂತೆ ಎಲ್ಲ ಅರ್ಚಕರು ಭಾಗಿಯಾಗಿದ್ದರು.
ಜೂನ್ 14ರಿಂದ ಶಬರಿಮಲೆಯಲ್ಲಿ ಮಾಸಿಕ ಪೂಜೆ ನಡೆಸಬೇಕಿತ್ತು. ಈ ಪೂಜೆ ನಡೆದರೆ ಕೇವಲ ಕೇರಳ ಮಾತ್ರವಲ್ಲದೆ ದೇಶದ ಹಲವು ಭಾಗಗಳಿಂದ ಭಕ್ತಾಧಿಗಳು ಆಗಮಿಸುತ್ತಾರೆ. ಶಬರಿಮಲೈ ದೇವಸ್ಥಾನದಲ್ಲಿ ಮಾರ್ಗಸೂಚಿಗಳ ಪಾಲನೆ ಕಷ್ಟ. ಇದರಿಂದ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಯಿತು.
ಈ ಹಿನ್ನೆಲೆಯಲ್ಲಿ ಶಬರಿಮಲೈ ದೇವಸ್ಥಾನ ತೆರೆಯದಿರಲು ಮತ್ತು ತಿಂಗಳ ಪೂಜೆಗೆ ಭಕ್ತಾದಿಗಳಿಗೆ ಅವಕಾಶ ನೀಡದರಿಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರ ಜೊತೆಗೆ ದೇವಸ್ಥಾನ ಉತ್ಸವ ರದ್ದು ಮಾಡಲು ಕೂಡಾ ಒಮ್ಮತದ ತಿರ್ಮಾನ ತೆಗೆದುಕೊಳ್ಳಲಾಗಿದೆ.