Connect with us

LATEST NEWS

ಕೇರಳ ವಿಮಾನ ದುರಂತ ಮೃತರ ಸಂಖ್ಯೆ 20ಕ್ಕೆ ಏರಿಕೆ

ಕೋಯಿಕ್ಕೋಡ್‌ ಅಗಸ್ಟ್ 8: :ದುಬೈಯಿಂದ ಬಂದ ಐಎಕ್ಸ್‌ 1344 ವಿಮಾನವು ಕೋಯಿಕ್ಕೋಡ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇಯಿಂದ ಜಾರಿ ಸಮೀಪದ ಕಣಿವೆಗೆ ಬಿದ್ದು ಎರಡು ಭಾಗವಾಗಿತ್ತು. ನಿನ್ನೆ ರಾತ್ರಿ ನಡೆದ ಈ ದುರ್ಘಟನೆಯಲ್ಲಿ ಪೈಲಟ್‌ ದೀಪಕ್‌ ಸಾಠೆ ಹಾಗೂ ಸಹ ಪೈಲಟ್‌ ಅಖಿಲೇಶ್‌ ಕುಮಾರ್‌ ಸೇರಿದಂತೆ 20 ಮಂದಿ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಗಾಯಗೊಂಡ 149 ಮಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದ್ದು, ಅದರಲ್ಲಿ 3 ಸ್ಥಿತಿ ಗಂಭೀರವಾಗಿದೆ . ಇನ್ನು 23 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.


ಈ ವಿಮಾನದಲ್ಲಿ ಸಿಬ್ಬಂದಿ ಸಹಿತ 191 ಪ್ರಯಾಣಿಕರಿದ್ದರು.ಸುಮಾರು 10 ವರ್ಷಗಳ ನಂತರ ದೇಶದಲ್ಲಿ ಸಂಭವಿಸಿದ ಭೀಕರ ವಾಣಿಜ್ಯ ವಿಮಾನ ದುರಂತ ಇದು ಎನ್ನಲಾಗಿದೆ. ವಂದೇ ಭಾರತ್ ಮಿಷನ್ ನಲ್ಲಿ ದುಬಾಯಿಯಿಂದ ಆಗಮಿಸುತ್ತಿದ್ದ ಏರ್ ಇಂಡಿಯಾದ ಐ.ಎಕ್ಸ್.-344 ವಿಮಾನವು ರನ್ ವೇನಲ್ಲಿ ಶುಕ್ರವಾರ ಜಾರಿದ ಪರಿಣಾಮ ಈ ದುರಂತ ಸಂಭವಿಸಿತ್ತು.


ಇಂದು ವಿಮಾನ ದುರಂತ ಸಂಭವಿಸಿದ ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್ ಪುರಿ ಶನಿವಾರ ಭೇಟಿ ನೀಡಿದರು. ಭೇಟಿ ನೀಡಿದ ಬಳಿಕ ಮಾತನಾಡಿರುವ ಹರ್‌ದೀಪ್‌ ಸಿಂಗ್‌ ಪುರಿ, ‘ಅಪಘಾತಕ್ಕೆ ಈಡಾಗಿರುವ ವಿಮಾನದ ಡಿಜಿಟಲ್ ಫ್ಲೈಟ್ ಡಾಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌ಗಳನ್ನು ಪತ್ತೆಹಚ್ಚಿ ವಶಪಡೆಯಲಾಗಿದೆ.

ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ) ತನಿಖೆ ನಡೆಸುತ್ತಿದೆ. ವಿಮಾನ ದುರಂತ ನಂತರದ ಸ್ಥಿತಿಗತಿ ಬಗ್ಗೆ ತಿಳಿದುಕೊಳ್ಳಲು ಮತ್ತು ಮುಂದಿನ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಇಲ್ಲಿಗೆ ಬಂದಿದ್ದೇನೆ. ಹಿರಿಯ ನಾಗರಿಕ ವಿಮಾನಯಾನ ಅಧಿಕಾರಿಗಳು ಮತ್ತು ವೃತ್ತಿಪರರೊಂದಿಗೆ ಸಮಾಲೋಚನೆ ನಡೆಸಲಿದ್ದೇನೆ ಎಂದು ಹರ್ದೀಪ್‌ ಸಿಂಗ್‌ ಹೇಳಿದ್ದಾರೆ.


ಇದೇ ವೇಳೆ ಸಂತ್ರಸ್ಥರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಮಾತನಾಡಿದ ಅವರು, ದುರಂತದಲ್ಲಿ ಸಾವನ್ನಪ್ಪಿದವರಿಗೆ ತಲಾ 10 ಲಕ್ಷ ಪರಿಹಾರ ನೀಡಲಾಗುತ್ತದೆ. ಅಂತೆಯೇ ಗಂಭೀರವಾಗಿ ಗಾಯಗೊಂಡವರಿಗೆ ತಲಾ 2 ಲಕ್ಷ ರೂ, ಸಣ್ಣ ಪುಟ್ಟ ಗಾಯಗೊಂಡವರಿಗೆ ತಲಾ 50 ಸಾವಿರ ರೂ ನೀಡುವುದಾಗಿ ಹೇಳಿದರು.


ಕೇಂದ್ರ ಸರಕಾರ ಪರಿಹಾರ ಘೋಷಿಸಿದ ಬೆನ್ನಲ್ಲೆ ಕೇರಳ ಸರಕಾರ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.